ಭಾರತವು 400 ಬಿಲಿಯನ್ ಡಾಲರ್ ರಫ್ತು ಗುರಿ ಸಾಧಿಸಿದೆ; ʼಮನ್‌ ಕಿ ಬಾತ್‌ʼ ನಲ್ಲಿ ಪ್ರಧಾನಿ ಮೋದಿ ಶ್ಲಾಘನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಂದು ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದ 87 ನೇ ಆವೃತ್ತಿಯಲ್ಲಿ ದೇಶಾವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಹಲವಾರು ವಿಚಾರಗಳ ಕುರಿತಾಗಿ ಪ್ರಸ್ತಾಪಿಸಿದ್ದಾರೆ.
ಭಾರತದ ರಫ್ತು ಹೆಚ್ಚಳಗೊಡಿರುವ ಕುರಿತಾಗಿ ಶ್ಲಾಘನೆ ವ್ಯಕ್ತಪಡಿಸಿದ ಪ್ರಧಾನಿ, ಜಾಗತಿಕವಾಗಿ ಭಾರತೀಯ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಭಾರತವು 400 ಬಿಲಿಯನ್ ಡಾಲರ್ ರಫ್ತು ಗುರಿಯನ್ನು ಸಾಧಿಸಿದೆ. ಈ ಸಾಧನೆಯು ದೇಶದ ಸಾಮರ್ಥ್ಯವನ್ನು ತೋರಿಸುತ್ತದೆ. ನಮ್ಮ ರೈತರು, ನಮ್ಮ ಎಂಜಿನಿಯರ್‌ಗಳು, ನಮ್ಮ ಸಣ್ಣ ಉದ್ಯಮಿಗಳು, ನಮ್ಮ ಎಂಎಸ್‌ಎಂಇ ವಲಯ, ಹಲವಾರು ವಿಭಿನ್ನ ವೃತ್ತಿಗಳಲ್ಲಿರುವ ಜನರ ವೃತ್ತಿಪರ ಕೆಲಸಗಳು ಮತ್ತು ಕೊಡುಗೆಗಳಿಂದ ವಿಶ್ವದಲ್ಲಿ ಭಾರತೀಯ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಹೇಳಿದರು.
ಕಳೆದ ವರ್ಷ ದೇಶದಾದ್ಯಂತದ 1.25 ಲಕ್ಷಕ್ಕೂ ಹೆಚ್ಚು ಸಣ್ಣ ಉದ್ಯಮಿಗಳು ಮತ್ತು ವ್ಯಾಪಾರಸ್ಥರು ತಮ್ಮ ಉತ್ಪನ್ನಗಳನ್ನು ಇ ಮಾರ್ಕೆಟ್‌ಪ್ಲೇಸ್ ಪೋರ್ಟಲ್ ಮೂಲಕ ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡಿದ್ದಾರೆ. ಭಾರತದ ಉಧ್ಯಮಗಳ ಬೆಳವಣಿಗೆ ದೃಷ್ಠಿಯಿಂದ ಇದು ಮಹತ್ವದ ವಿಚಾರವಾಗಿದೆ ಎಂದಿದ್ದಾರೆ.
ಆಯುಷ್ ಉದ್ಯಮದ ವಿಸ್ತರಣೆ ಕುರಿತಾಗಿ ಸವಿಸ್ತಾರವಾಗಿ ಮಾತನಾಡಿದ ಪ್ರಧಾನಿ ಮೋದಿ, ಆರು ವರ್ಷಗಳ ಹಿಂದೆ ಸುಮಾರು 22 ಸಾವಿರ ಕೋಟಿ ರೂ. ವಹಿವಾಟು ನಡೆಸುತ್ತಿದ್ದ ಆಯುಷ್ ಉದ್ಯಮವು ಇದೀಗ, ಸುಮಾರು ಒಂದು ಲಕ್ಷದ ನಲವತ್ತು ಸಾವಿರ ಕೋಟಿ ರೂಪಾಯಿಗಳಷ್ಟು ವಹಿವಾಟು ನಡೆಸುತ್ತಿದೆ ಎಂದು ಶ್ಲಾಘಿಸಿದರು.
ದೇಶದ ನೀರಿನ ಸಂರಕ್ಷಣೆಯ ಮಹತ್ವಗಳ ಕುರಿತಾಗಿ ಮಾತನಾಡಿದ ಅವರು, ಜಲ ಸಂರಕ್ಷಣೆಯಲ್ಲಿ ‘ಜಲ್ ಮಂದಿರ ಯೋಜನೆ’ ದೊಡ್ಡ ಪಾತ್ರವನ್ನು ವಹಿಸಿದೆ ಎಂದರು.
ಭಾರತದ ಸಂಸ್ಕೃತಿ, ನಮ್ಮ ಭಾಷೆಗಳು, ನಮ್ಮ ಉಪಭಾಷೆಗಳು, ನಮ್ಮ ಜೀವನ ವಿಧಾನ, ಆಹಾರದ ವೈಶಾಲ್ಯ, ಈ ಎಲ್ಲಾ ವೈವಿಧ್ಯತೆಗಳು ನಮ್ಮ ದೊಡ್ಡ ಶಕ್ತಿಗಳಾಗಿವೆ ಎಂದ ಪ್ರಧಾನಿ, ವೈವಿಧ್ಯತೆಯು ನಮ್ಮನ್ನು ಒಂದುಗೂಡಿಸುವ ವಿಷಯವಾಗಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಪದ್ಮ ಪ್ರಶಸ್ತಿ ಪುರಸ್ಕೃತರಾದ ಶಿವಾನಂದರ ಕುರಿತಾಗಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಪ್ರಧಾನಿಗಳು, ಅವರ ಯೋಗ, ದೈಹಿಕ ಕ್ಷಮತೆ ಹಾಗೂ ಚೈತನ್ಯದ ಬಗ್ಗೆ ಇಡೀ ದೇಶವೇ ದೇಶ ಮಾತನಾಡುತ್ತಿದೆ ಎಂದಿದ್ದಾರೆ.
ಸ್ವಾಭಾವಿಕ ನೀರಿನ ಮೂಲಗಳನ್ನು ರಕ್ಷಿಸಲು ಕೆಲವು ಜನರು ವೈಯಕ್ತಿಕವಾಗಿ ಕೆಲಸ ಮಾಡುವುದಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗೋದಾವರಿ ನದಿಗೆ ತ್ಯಾಜ್ಯ ಎಸೆಯುವುದನ್ನು ತಡೆಯಲು ನಾಸಿಕ್​ನ ಚಂದ್ರಕಿಶೋರ್ ಅವರು ಹೋರಾಟ ನಡೆಸಿದ್ದಾರೆ. ಪುರಿಯ ರಾಹುಲ್ ಮಹಾರಾಣ ಅವರು ಧಾರ್ಮಿಕ ಸ್ಥಳಗಳಲ್ಲಿ ಸಂಗ್ರಹವಾದ ಕಸವನ್ನು ಸ್ವಚ್ಛಗೊಳಿಸುತ್ತಾರೆ ಎಂದು ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!