ಉಕ್ರೇನ್‌ ಕದನ: ಹತಾಶ ರಷ್ಯಾ ಸೈನಿಕರಿಂದಲೇ ರಷ್ಯಾ ಕಮಾಂಡರ್‌ ಜನರಲ್‌ ಹತ್ಯೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಉಕ್ರೇನ್ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆ ಆರಂಭಗೊಂಡು ತಿಂಗಳು ಕಳೆದಿದೆ. ಈ ನಡುವೆ ರಷ್ಯಾ ಸೇನೆಯ ಕಮಾಂಡರ್ ಜನರಲ್‌ ಒಬ್ಬರನ್ನು ರಷ್ಯಾ ಸೈನಿಕರೇ ಹತ್ಯೆಗೈದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸೇನೆಯ ದಕ್ಷಿಣ ಮಿಲಿಟರಿ ವಲಯದ 49ನೇ ಸಮಗ್ರ ತುಕಡಿಯ ಲೆಫ್ಟಿನೆಂಟ್ ಜನರಲ್ ಜಾಕೊವ್ ರೆಝೆನ್​ಸ್ಟೆವ್ ಸಾವನ್ನಪ್ಪಿದವರು. ನಿರಂತರ ಯುದ್ಧ ಮತ್ತು ಉಕ್ರೇನ್‌ ನ ಪ್ರಬಲ ಪ್ರತಿರೋಧದಿಂದ ಹತಾಶ ಸ್ಥಿತಿಗೆ ತಲುಪಿರುವ ರಷ್ಯಾ ಸೈನಿಕರು ಜಾಕೋವ್‌ ರ ಮೇಲೆ ಯುದ್ಧ ಟ್ಯಾಂಕರ್‌ ಹರಿಸಿ ಕೊಂದುಹಾಕಿದ್ದಾರೆ ಎಂದು ವರದಿಯಾಗಿದೆ. ಉಕ್ರೇನ್ ರಾಜಧಾನಿ ಕೈವ್‌ನ ಪಶ್ಚಿಮದಲ್ಲಿರುವ ಮಕರಿವ್‌ನಲ್ಲಿ ಈ ಘಟನೆ ಸಂಭವಿಸಿದೆ.
ಯುದ್ಧ ಆರಂಭಗೊಂಡ 4ನೇ ದಿನ ಹೇಳಿಕೆನೀಡಿದ್ದ ಜಾಕೊವ್, ಕೆಲವೇ ಗಂಟೆಗಳಲ್ಲಿ ಯುದ್ಧ ಕೊನೆಗೊಳ್ಳಲಿದೆ ಎಂದಿದ್ದರು. ಉದ್ಧ ಸುಧೀರ್ಘವಾಗುತ್ತ ಸಾಗಿದಂತೆ ಹತಾಶ ಸ್ಥಿತಿಗೆ ತಲುಪುತ್ತಿರುವ ರಷ್ಯಾ ಸೈನಿಕರು ತಮ್ಮ ಕಮಾಂಡರ್‌ ವಿರುದ್ಧವೇ ಕ್ರೋಧಗೊಂಡು ಕೊಂದುಹಾಕಿದ್ದಾರೆ ಎಂದು ಹೇಳಲಾಗಿದೆ.
ಉಕ್ರೇನ್‌ ನಲ್ಲಿ ಈವರೆಗೆ ರಷ್ಯಾ ಸೇನೆಯ ೭ ಜನರಲ್‌ಗಳು ಮೃತಪಟ್ಟಿದ್ದಾರೆ. ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ, ಫೆಬ್ರವರಿ 24 ರಂದು ಮಿಲಿಟರಿ ಆಕ್ರಮಣವನ್ನು ಪ್ರಾರಂಭಿಸಿದಾಗಿನಿಂದ ರಷ್ಯಾದ 1,351 ಮಿಲಿಟರಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 3,835 ಸೈನಿಕರು ಗಾಯಗೊಂಡಿದ್ದಾರೆ.
ಈ ನಡುವೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ರಷ್ಯಾ, ಉಕ್ರೇನ್‌ನಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆಯ ಮೊದಲ ಹಂತವು ಮುಗಿದಿದೆ ಮತ್ತು ಈಗ ಪೂರ್ವ ಡೊನ್‌ಬಾಸ್ ಪ್ರದೇಶದ ಸಂಪೂರ್ಣ ವಿಮೋಚನೆಯತ್ತ ಗಮನ ಹರಿಸಲಿದೆ ಎಂದು ಘೋಷಿಸಿದೆ. ಯುದ್ಧದಿಂದ ಹೈರಾಣಾಗಿರುವ ರಷ್ಯಾ ಮುಖವುಳಿಸಿಕೊಳ್ಳುವ ಸಲುವಾಗಿ ಇಂತಹ ಹೇಳಿಕೆ ಹೊರಡಿಸಿದೆ ಎಂದು ಪಾಶ್ಚಿಮಾತ್ಯ ದೇಶಗಳು ಹೇಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!