ರಾಜಸ್ಥಾನಕ್ಕೂ ಬಂತು ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ರಾಜಸ್ಥಾನದ ಮೊದಲ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 12ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಉದ್ಘಾಟನಾ ರೈಲು ಜೈಪುರ ಮತ್ತು ದೆಹಲಿ ಕಂಟೋನ್ಮೆಂಟ್ ನಡುವೆ ಚಲಿಸಲಿದೆ ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯದ ಪ್ರಕಟಣೆ ಹೇಳಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸೇವೆಯು ಏಪ್ರಿಲ್ 13 ರಿಂದ ಪ್ರಾರಂಭವಾಗಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ರೈಲು ಅಜ್ಮೇರ್ ಹಾಗೂ ದೆಹಲಿ ಕಂಟೋನ್ಮೆಂಟ್ ನಿಲ್ದಾಣಗಳ ನಡುವೆ ಲಭ್ಯವಿರಲಿದೆ. ಜೈಪುರ, ಅಲ್ವಾರ್ ಹಾಗೂ ಗುರುಗ್ರಾಮಗಳಲ್ಲಿ ನಿಲುಗಡೆ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಹೊಸ ವಂದೇ ಭಾರತ್ ರೈಲು ಅಜ್ಮೇರ್ ಹಾಗೂ ದೆಹಲಿ ಕಂಟೋನ್ಮೆಂಟ್ ಮಧ್ಯೆ 5 ಗಂಟೆ 15 ನಿಮಿಷಗಳ ಅವಧಿಯಲ್ಲಿ ಸಂಚರಿಸಲಿದೆ. ಈ ನಿಲ್ದಾಣಗಳ ನಡುವೆ ಪ್ರಸ್ತುತ ಅತಿವೇಗದಲ್ಲಿ ಚಲಿಸುವ ಶತಾಬ್ಧಿ ಎಕ್ಸ್​​ಪ್ರೆಸ್ 6 ಗಂಟೆ 15 ನಿಮಿಷ ತೆಗೆದುಕೊಳ್ಳುತ್ತಿದೆ. ಇದಕ್ಕಿಂತಲೂ ವಂದೇ ಭಾರತ್ ರೈಲು ಒಂದು ಗಂಟೆ ಕಡಿಮೆ ಅವಧಿಯಲ್ಲಿ ಗಮ್ಯ ತಲುಪಲಿದೆ.

ಅಜ್ಮೇರ್ ಹಾಗೂ ದೆಹಲಿ ಕಂಟೋನ್ಮೆಂಟ್ ನಡುವೆ ಸಂಚರಿಸುವ ವಂದೇ ಭಾರತ್ ರೈಲು ಓವರ್​ಹೆಡ್ ಎಲೆಕ್ಟ್ರಿಕ್ (OHE) ತಂತ್ರಜ್ಞಾನ (ನೂತನ ತಂತ್ರಜ್ಞಾನ) ಹೊಂದಿರುವ ವಿಶ್ವದ ಮೊದಲ ಸೆಮಿ ಹೈಸ್ಪೀಡ್ ಪ್ಯಾಸೆಂಜರ್ ರೈಲು ಆಗಿರಲಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ಈ ರೈಲು ಪುಷ್ಕರ್, ಅಜ್ಮೀರ್ ಶರೀಫ್ ದರ್ಗಾ ಸೇರಿದಂತೆ ರಾಜಸ್ಥಾನದ ಪ್ರಮುಖ ಪ್ರವಾಸಿ ತಾಣಗಳ ಸಂಪರ್ಕವನ್ನು ಸುಗಮಗೊಳಿಸಲಿದೆ. ಪರಿಣಾಮವಾಗಿ ಈ ಪ್ರದೇಶದಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ದೊರೆಯಲಿದೆ ಎಂದು ಪಿಎಂಒ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!