ತಿರುಮಲ ಶ್ರೀವಾರಿ ದರುಶನ ಪಡೆದ ಪ್ರಧಾನಿ, ತಿರುಪತಿಯಲ್ಲಿ ಭಾರೀ ಭದ್ರತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆಲಂಗಾಣ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿರುವ ಪ್ರಧಾನಿ ಮೋದಿ ಸೋಮವಾರ ಬೆಳ್ಳಂಬೆಳಗ್ಗೆ ತಿರುಪತಿಗೆ ಭೇಟಿ ಕೊಟ್ಟು, ಶ್ರೀ ವೆಂಕಟೇಶ್ವರ ಸ್ವಾಮಿಯ ದರುಶನ ಪಡೆದರು.

ಟಿಟಿಡಿ ದೇಗುಲದ ಮಹಾದ್ವಾರ ತಲುಪಿದ ಪ್ರಧಾನಿಯನ್ನು ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ, ಒಇ ಧರ್ಮರೆಡ್ಡಿ ಹಾಗೂ ಅರ್ಚಕರು ಆತ್ಮೀಯವಾಗಿ ಸ್ವಾಗತಿಸಿದರು. ಶ್ರೀವಾರಿ ದುರಶನದ ಬಳಿಕ ಪ್ರಧಾನಿ ಮೋದಿಗೆ ರಂಗನಾಯಕ ಮಂಟಪದಲ್ಲಿ ಅರ್ಚಕರು ವೇದಾಶಿರ್ವಚನ ಮಾಡಿದರು. ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ, ಮೋದಿಯವರಿಗೆ ಶ್ರೀವಾರಿ ಚಿತ್ರಪಟ ಮತ್ತು ತೀರ್ಥ ಪ್ರಸಾದ ನೀಡಿದರು. ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಮೊದಲು ಮೋದಿ ತಿಮ್ಮಪ್ಪನ ದರುಶನ ಪಡೆದು ಅತಿಥಿಗೃಹ ತಲುಪಿದರು.

ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ತಿರುಮಲಕ್ಕೆ ಭೇಟಿ ನೀಡುತ್ತಿರುವುದು ಇದು ನಾಲ್ಕನೇ ಬಾರಿ. 2015, 2017 ಮತ್ತು 2019ರಲ್ಲಿ ತಿರುಮಲಕ್ಕೆ ಪ್ರಧಾನಿ ಭೇಟಿ ನೀಡಿದ್ದರು. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ವಿಐಪಿ ಬ್ರೇಕ್ ದರ್ಶನವನ್ನು ಟಿಟಿಡಿ ರದ್ದುಗೊಳಿಸಿದ್ದು, ತಿರುಮಲದಾದ್ಯಂತ 2,000 ಪೊಲೀಸರನ್ನು ಭದ್ರತೆಗಾಗಿ ಏರ್ಪಡಿಸಲಾಗಿತ್ತು.

ಎನ್‌ಎಸ್‌ಜಿ ತಂಡ ವಿಐಪಿ ಅತಿಥಿ ಗೃಹದ ಸುತ್ತ ಸುತ್ತುವರಿದಿದ್ದವು. ತಿರುಮಲ ಭೇಟಿ ಬಳಿಕ ತಿರುಪತಿ ವಿಮಾನ ನಿಲ್ದಾಣದಿಂದ ತೆಲಂಗಾಣಕ್ಕೆ ಪ್ರಧಾನಿ ತೆರಳಿದರು. ಪ್ರಧಾನಮಂತ್ರಿಯವರು ಇಂದು ಮಹಬೂಬಾಬಾದ್ ಮತ್ತು ಕರೀಂನಗರದಲ್ಲಿ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಸಂಜೆ ಹೈದರಾಬಾದ್‌ನ ರೋಡ್ ಶೋನಲ್ಲಿ ಮೋದಿ ಭಾಗವಹಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!