ಹೊಸದಿಗಂತ ಹಾವೇರಿ:
ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರ, ಬೋಲೋ ಭಾರತ ಮಾತಾಕೀ, ಜೋರ್ ಸೇ ಬೋಲೋ ಪ್ಯಾರ್ ಸೇ ಬೋಲೋ ಹಿಂದೂಸ್ತಾನ್ ಹಿಂದೂಸ್ತಾನ್, ನಮ್ಮದು ನಮ್ಮದು ಪಿಒಕೆ ನಮ್ಮದು…ಇದು ಶುಕ್ರವಾರ ಹಾವೇರಿ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿದ ತಿರಂಗಾ ಯಾತ್ರೆಯಲ್ಲಿ ಅನುರಣಿಸಿದ ಘೋಷಣೆಗಳು.
ಆಪರೇಷನ್ ಸಿಂಧೂರ ಯಶಸ್ಸಿನ ಹಿನ್ನೆಲೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ನಾವಿದ್ದೇವೆ. ಆಪರೇಷನ್ ಸಿಂಧೂರ ಜೊತೆಗೆ ನಾವಿದ್ದೇವೆ. ಆತ್ಮರಕ್ಷಣೆಗಾಗಿ ನಾವು ಮತ್ತು ನಾಗರೀಕರು ಸದಾ ಭಾರತೀಯ ಸೇನೆಗೆ ಬೆಂಬಲವಾಗಿ ನಿಲ್ಲಲಿದ್ದೇವೆ ಎಂಬ ಭರವಸೆ ಸರ್ವ ವ್ಯಾಪಕವಾಗಿ ಕೇಳಿ ಬಂತು.
ನಿವೃತ್ತ ಸೈನಿಕರ ಸಂಘಟನೆ, ಪ್ಯಾರಾ ಮೆಡಿಕಲ್ ಕಾಲೇಜು, ಪಿಯುಸಿ, ಪದವಿ ಮತ್ತು ಸ್ನಾತಕ ಸ್ನಾತಕೋತ್ತರ ಪದವಿ ಕಾಲೇಜುಗಳ ಸಾವಿರಾರು ಯುವಕ -ಯುವತಿಯರು, ಉರ್ದು ಶಾಲಾ ಮಕ್ಕಳು, ಸುಮಾರು ಅರ್ಧ ಕಿಲೋ ಮೀಟರ್ ಉದ್ದದ ತ್ರಿವರ್ಣ ಧ್ವಜ ಹಿಡಿದು ಸಾಗಿ ಸೈನಿಕರಿಗೆ ತಮ್ಮ ಬೆಂಬಲ ವ್ಯಕ್ತ ಪಡಿಸಿದರು.
ತಿರಂಗಾ ಯಾತ್ರೆ ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡು ಮಹಾತ್ಮಾ ಗಾಂಧಿ ರಸ್ತೆ ಮೂಲಕ ಸಾಗಿ ಹೊಸಮನಿ ಸಿದ್ದಪ್ಪ ವೃತ್ತದ ಮೂಲಕ ಹುತಾತ್ಮ ಮೈಲಾರ ಮಹಾದೇವಪ್ಪ ವೃತ್ತದಲ್ಲಿ ಸಮಾವೇಶಗೊಂಡಿತು. ಈ ವೇಳೆ ಮಾಜಿ ಸೈನಿಕರು ಪಾಲ್ಗೊಂಡು ಜೀವನೋತ್ಸಾಹ ತುಂಬಿದರು. ವಿವಿಧ ಸಂಘಟನೆಗಳ ವತಿಯಿಂದ ಮಾಜಿ ಸೈನಿಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ಈ ವೇಳೆ ಬಿಜೆಪಿ ಪದಾಧಿಕಾರಿಗಳು, ವಿವಿಧ ಸಂಘ – ಸಂಸ್ಥೆಗಳ ಪದಾಧಿಕಾರಿಗಳು ಸೇರಿ ಸಾವಿರಾರು ಜನರು ಪಾಲ್ಗೊಂಡಿದ್ದರು.