ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾತ್ರಿ ನಡು ರಸ್ತೆಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಬೈಕ್ ವೀಲಿಂಗ್ ಮಾಡುತ್ತಿದ್ದ 11 ಮಂದಿ ಆರೋಪಿಗಳನ್ನು ಬೆಂಗಳೂರು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಮಧ್ಯರಾತ್ರಿ ನಡುರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ವ್ಹೀಲಿಂಗ್ ಮಾಡಿದ ಪ್ರಕರಣದ 11 ಆರೋಪಿಗಳನ್ನ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದು, ನಯೀಂ ಪಾಶಾ, ಅರಾಫತ್, ಸಾಹಿಲ್ ಹುಸೈನ್, ನಜ್ಮತ್, ಅದ್ನಾನ್ ಪಾಶಾ, ನಿಯಾಮತುಲ್ಲಾ ಸೇರಿದಂತೆ ಒಟ್ಟು 11 ಆರೋಪಿಗಳನ್ನ ಬಂಧಿಸಲಾಗಿದೆ. ಮಾತ್ರವಲ್ಲದೇ ಈ ಕೃತ್ಯಕ್ಕೆ ಬಳಸಿದ್ದ 7 ದ್ವಿಚಕ್ರ ವಾಹನಗಳನ್ನ ಜಪ್ತಿ ಮಾಡಲಾಗಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್ ತಿಳಿಸಿದ್ದಾರೆ.
ಫೆಬ್ರವರಿ 13ರಂದು ಶಬ್-ಇ-ಬಾರಾತ್ ಹಬ್ಬ ಆಚರಣೆಗೆ ಕೆ.ಜಿ ಹಳ್ಳಿಯ ನೂರ್ ಮಸೀದಿ ಬಳಿ ಸೇರಿದ್ದರು. ಬಳಿಕ ಅದೇ ಸಂದರ್ಭದಲ್ಲಿ ರೀಲ್ಸ್ ಕ್ರೇಜ್‌ಗಾಗಿ ಮಾರಕಾಸ್ತ್ರ ಹಿಡಿದು, ತ್ರಿಬಲ್ ರೈಡ್, ವ್ಹೀಲಿಂಗ್ ಮಾಡುತ್ತಾ ಕೆ.ಜಿ ಹಳ್ಳಿಯಿಂದ, ಡಿ.ಜೆ ಹಳ್ಳಿ, ರಾಮಮೂರ್ತಿ ನಗರ ಮಾರ್ಗವಾಗಿ ಹೊಸಕೋಟೆ ಟೋಲ್‌ವರೆಗೂ ಆರೋಪಿಗಳು ಹೋಗಿದ್ದರು. ಅದೇ ರೀತಿ ಕೆ.ಜಿ ಹಳ್ಳಿಗೆ ವಾಪಸಾಗಿದ್ದರು. ಈ ಕುರಿತ ವಿಡಿಯೋಗಳು ವ್ಯಾಪಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.