ಹೊಸದಿಗಂತ ವರದಿ ಮಡಿಕೇರಿ:
ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಶೈಲಜಾ ಬಡವಾಣೆಯಲ್ಲಿರುವ ಸ್ಮಶಾನದ ಜಾಗದಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಗಿಡಗಳನ್ನು ಬೆಳೆಸಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೇರೂರು ಗ್ರಾಮದ ನಿವಾಸಿ ಪ್ರಶಾಂತ್ (29) ಎಂಬಾತನೇ ಬಂಧನಕ್ಕೊಳಗಾದವನಾಗಿದ್ದು, ಆರೋಪಿಯಿಂದ1 ಕೆ.ಜಿ 730 ಗ್ರಾಂ ತೂಕದ 19 ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಶೈಲಜಾ ಬಡವಾಣೆಯಲ್ಲಿರುವ ಸ್ಮಶಾನದ ಜಾಗದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಗಿಡಗಳನ್ನು ಬೆಳೆಸಿರುವ ಕುರಿತು ಖಚಿತ ಮಾಹಿತಿ ಹಿನ್ನಲೆಯಲ್ಲಿ ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ವೃತ್ತ ನಿರೀಕ್ಷಕ ಪ್ರಕಾಶ್.ಬಿ.ಜಿ, ಪಿಎಸ್ಐ ಗೀತಾ, ಸಿಬ್ಬಂದಿಗಳು ಹಾಗೂ ಡಿಸಿಆರ್‌ಬಿ ಸಿಬ್ಬಂದಿಗಳ ವಿಶೇಷ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ. ಅಲ್ಲದೆ ಅಧಿಕಾರಿ, ಸಿಬ್ಬಂದಿಗಳ ಕಾರ್ಯವನ್ನು ಅವರು ಶ್ಲಾಘಿಸಿದ್ದಾರೆ.