ಹೊಸದಿಗಂತ ವರದಿ ಹಾಸನ:
ನಗರದ ಬಿ.ಎಮ್ ರಸ್ತೆ ಬಳಿ ಇರುವ ರಾಜಕಾಲುವೆಯಲ್ಲಿ ಹೆಣ್ಣು ಮಗು ಎಂಬ ಕಾರಣಕ್ಕೆ ಆಗಷ್ಟೇ ಜನಿಸಿದ ನವಜಾತ ಶಿಶುವನ್ನು ಬಿಸಾಡಿ ಹೋಗಿರುವ ಘಟನೆ ಕುವೆಂಪು ನಗರದಲ್ಲಿ ಸೋಮವಾರ ಬೆಳಕಿಗೆ ಬಂದಿದೆ.
ಕೊಳಚೆ ನೀರಿನಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾದ ಹಿನ್ನಲೆ ಸ್ಥಳೀಯರು ಸಮೀಪದ ಕೆ.ಆರ್.ಪುರಂ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿ ಪೊಲೀಸರು ಪರಿಶೀಲಿಸಿದಾಗ ಹೆಣ್ಣು ಶಿಶುವಿನ ಶವವೆಂದು ಗೊತ್ತಾಗಿದ್ದು, ಮಗು ಜನಿಸಿದ ಕೂಡಲೇ ನಿರ್ದಯಿ ತಾಯಿ ಹೆಣ್ಣು ಮಗು ಎಂಬ ಕಾರಣಕ್ಕೆ ಬಿಸಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿದ್ದಾರೆ.
ನವಜಾತ ಶಿಶುವಿನ ಮೃತದೇಹದಲ್ಲಿ ಕರುಳ ಬಳ್ಳಿಯಿರುವುದರಿಂದ ಹುಟ್ಟಿದ ತಕ್ಷಣ ತಂದು ಬಿಸಾಡಿ ಹೋಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕೃತ್ಯ ಎಸಗಿರುವವರನ್ನು ಪತ್ತೆ ಹಚ್ಚಲು ತನಿಖೆ ಕೈಗೊಂಡಿದ್ದಾರೆ.