ಹೊಸದಿಗಂತ ವರದಿ ಅಂಕೋಲಾ:
ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಅಂಕೋಲಾ ಪೊಲೀಸರು ಬಂಧಿಸಿದ್ದು, ಕಳ್ಳತನ ಮಾಡಲಾಗಿದ್ದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಂಬದಕೋಣ ಬೋಳಂಬಳ್ಳಿ ನಿವಾಸಿ ರಂಜಿತ್ ರಾಮಚಂದ್ರ ಪೂಜಾರಿ ಬಂಧಿತ ಆರೋಪಿಯಾಗಿದ್ದು ಇನ್ನೋರ್ವ ಆರೋಪಿತನಿಗಾಗಿ ಶೋಧ ಮುಂದುವರಿದಿದೆ. ಬಂಧಿತ ಆರೋಪಿ ವಯಸ್ಸು 23ವರ್ಷ.
ಆರೋಪಿಗಳು ಜುಲೈ 30 ರಂದು ಬೆಳಗಿನ ಜಾವ ವಂದಿಗೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66 ಪಕ್ಕದ ಅಂಗಡಿಯೊಂದರ ಎದುರು ನಿಲ್ಲಿಸಿದ್ದ ಬೈಕ್ ಎಗರಿಸಿ ಪರಾರಿಯಾಗಿದ್ದರು. ಇದು ವಂದಿಗೆ ನಿವಾಸಿ ರಾಜೇಶ ಶಿವಾನಂದ ಶೆಟ್ಟಿ ಎನ್ನುವವರಿಗೆ ಸೇರಿದ್ದ ಬೈಕ್ ಆಗಿದ್ದು, ಕಳ್ಳತನದ ಬಳಿಕ ಮಾಲೀಕ ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠ ವಿಷ್ಣುವರ್ಧನ್ ಅವರ ನಿರ್ದೇಶನದಲ್ಲಿ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಪೊಲೀಸರ ಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠ ವಿಷ್ಣುವರ್ಧನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.