ಹೊಸದಿಗಂತ ವರದಿ, ಮೈಸೂರು:
ನಗರದ ಚಾಮುಂಡಿಬೆಟ್ಟದಲ್ಲಿ ಮಹಿಷ ಉತ್ಸವ ಹಾಗೂ ಅದನ್ನು ವಿರೋಧಿಸಿ ಚಾಮುಂಡಿ ಚಲೋ ಕಾರ್ಯಕ್ರಮ ನಡೆಸಲು ನಿಷೇಧ ಹೇರಿದ್ದ ಪೊಲೀಸರು ಶುಕ್ರವಾರ ಇಡೀ ಚಾಮುಂಡಿಬೆಟ್ಟಕ್ಕೆ ದಿಗ್ಬಂಧನ ಹಾಕಿದ್ದರು. ಇದರಿಂದಾಗಿ ಭಕ್ತರು ಪರದಾಡುವಂತಾಯಿತು.
ಚಾಮುಂಡಿಬೆಟ್ಟಕ್ಕೆ ಹೋಗುವ ನಾಲ್ಕು ಮಾರ್ಗಗಳನ್ನು ಬ್ಯಾರಿಕೇಡ್‌ಗಳನ್ನು ಹಾಕುವ ಮೂಲಕ ಬಂದ್ ಮಾಡಿದ ಪೊಲೀಸರು, ಸ್ಥಳದಲ್ಲಿಯೇ ಕುರ್ಚಿಗಳನ್ನು ಹಾಕಿಕೊಂಡು ಕಾವಲಿಗೆ ಕುಳಿತ್ತಿದ್ದರು. ಬೆಟ್ಟದ ನಿವಾಸಿಗಳನ್ನು ಹೊರತುಪಡಿಸಿ, ಹೊರಗಿನ ಯಾವುದೇ ಜನರಿಗೆ ಚಾಮುಂಡಿಬೆಟ್ಟ ಪ್ರವೇಶಿಸುವುದಕ್ಕೆ ನಿರ್ಬಂಧ ಹೇರಿದ್ದರು. ಹಾಗಾಗಿ ಬೆಟ್ಟಕ್ಕೆ ಹೋಗಲೆಂದು ಬಂದವರನ್ನು ತಡೆದು, ಬೆಟ್ಟದ ನಿವಾಸಿಗಳಾಗಿದ್ದರೆ ಮಾತ್ರ ಬೆಟ್ಟಕ್ಕೆ ಹೋಗಲು ಬಿಡುತ್ತಿದ್ದರು.
ಇಂದು ಬೆಟ್ಟಕ್ಕೆ ಜನರ ಪ್ರವೇಶ ನಿರ್ಬಂಧಿಸಿರುವ ಬಗ್ಗೆ ಸರಿಯಾದ ಮಾಹಿತಿಯಿಲ್ಲದೆ, ಶುಕ್ರವಾದ ಕಾರಣ ಚಾಮುಂಡೇಶ್ವರಿಯ ದರ್ಶನಕ್ಕೆಂದು ಬಂದ ನೂರಾರು ಮಂದಿ ಭಕ್ತರಿಗೆ ಪ್ರವೇಶವನ್ನು ನಿರಾಕರಿಸಲಾಯಿತು. ಹೀಗಾಗಿ ಕೆಲವರು ಪೊಲೀಸರೊಂದಿಗೆ ಮಾತಿನ ಚಕಮಕಿ ಕೂಡ ನಡೆಸಿದರು. ಕೊನೆಗೆ ನಿಂತ ಸ್ಥಳದಲ್ಲಿದಿಂದಲೇ ಚಾಮುಂಡೇಶ್ವರಿಗೆ ಭಕ್ತಿ ಭಾವದಿಂದ ನಮಿಸಿ ವಾಪಾಸ್ ತೆರಳಿದರು.
ಬೆಟ್ಟಕ್ಕೆ ಬರುವ ಮೆಟ್ಟಿಲುಗಳನ್ನೂ ಬಂದ್ ಮಾಡಿ, ಅಲ್ಲಿಂದ ಜನರು, ಭಕ್ತರು ಬೆಟ್ಟಕ್ಕೆ ಬರುವುದನ್ನು ತಡೆಹಿಡಿಯಲಾಗಿತ್ತು.
ಚಾಮುಂಡಿಬೆಟ್ಟದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಮಹಿಷನ ಪ್ರತಿಮೆಯನ್ನು ಹೊದಿಕೆಯಿಂದ ಮುಚ್ಚಲಾಗಿತ್ತು.