ಪೊಲೀಸ್ ಇಲಾಖೆ- ನ್ಯಾಯಾಂಗ ಇಲಾಖೆ ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕು: ಜಸ್ಟಿಸ್ ಪ್ರದೀಪ್ ಸಿಂಗ್ ಯೆರೂರ್

ಹೊಸದಿಗಂತ ವರದಿ ಚಿತ್ರದುರ್ಗ:

ನ್ಯಾಯಾಲಯಗಳು ಅಪರಾಧ ನಿರ್ಣಯ ಕೈಗೊಳ್ಳುವಲ್ಲಿ ಪರಿಣಾಮಕಾರಿ ತನಿಖೆಯ ಅಗತ್ಯವಿದೆ, ಹಾಗಾಗಿ ಪರಸ್ಪರ ಪೂರಕವಾಗಿ ಕೆಲಸ ಮಾಡುವುದರಿಂದ ನೊಂದವರಿಗೆ ನ್ಯಾಯ ನೀಡಲು ಸಾಧ್ಯ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಚಿತ್ರದುರ್ಗ ಆಡಳಿತಾತ್ಮಕ ನ್ಯಾಯಮೂರ್ತಿ ಜಸ್ಟಿಸ್ ಪ್ರದೀಪ್ ಸಿಂಗ್ ಯೆರೂರ್ ಅಭಿಪ್ರಾಯಪಟ್ಟರು.

ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಪೊಲೀಸ್ ವತಿಯಿಂದ ನ್ಯಾಯಾಂಗ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸಿಆರ್‌ಪಿಸಿ ಮತ್ತು ಎನ್‌ಡಿಪಿಎಸ್ ಕಾಯ್ದೆ ಕುರಿತು ನಗರದ ಜಿ.ಪಂ. ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ನ್ಯಾಯಾಂಗ ಇಲಾಖೆ ನ್ಯಾಯದಾನ ಮಾಡುವಲ್ಲಿ ಪೊಲೀಸರ ಸಹಕಾರ ತುಂಬಾ ಅಗತ್ಯ. ಪೊಲೀಸರ ಸಹಕಾರ ಇಲ್ಲದೇ ನ್ಯಾಯಾಂಗ ವ್ಯವಸ್ಥೆ ಕೆಲಸ ಮಾಡಲು ಸಾಧ್ಯವಿಲ್ಲ. ಹಾಗಾಗಿ ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಯಾವುದೇ ಪ್ರಕರಣ ಕುರಿತು ನಿಸ್ಪಕ್ಷಪಾತವಾಗಿ ಅಗತ್ಯ ಮಾಹಿತಿ ಕಲೆಹಾಕಬೇಕು. ಆ ಮೂಲಕ ನ್ಯಾಯಾಂಗ ಇಲಾಖೆಗೆ ಸಹಕಾರ ನೀಡಬೇಕು. ನ್ಯಾಯಾಂಗ ಇಲಾಖೆ ಅಧಿಕಾರಿಗಳು ಸಹ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳಿಗೆ ಅನುಗುಣವಾಗಿ ನ್ಯಾಯದಾನ ಮಾಡಬೇಕು ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮ ನಾಲ್ಕನೇ ಮುಖ್ಯ ಅಂಗ. ಯಾವುದೇ ಅಪರಾಧ ಮತ್ತಿತರ ಪ್ರಕರಣಗಳ ಕುರಿತು ಮಾಧ್ಯಮಗಳು ವರದಿ ಮಾಡುವ ಮೂಲಕ ಬೆಳಕನ್ನು ಚೆಲ್ಲುತ್ತವೆ. ಅಂತಹ ವರದಿಗಳನ್ನಾಧರಿಸಿ ಪೊಲೀಸರು ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ ಮಾಹಿತಿ ಕಲೆ ಹಾಕಬಹುದು. ಯಾವುದೇ ವ್ಯಕ್ತಿ ಮಾಡಿದ ತಪ್ಪನ್ನು ಸಾಬೀತು ಮಾಡಿ ತೋರಿಸಬೇಕು. ಆ ಮೂಲಕ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಶಿಕ್ಷೆ ನೀಡುವ ಕೆಲಸವಾಗಬೇಕು ಎಂದರು.

ಪೊಲೀಸರು ಉತ್ತಮ ಅಧಿಕಾರ ಹೊಂದಿದ್ದಾರೆ. ಹಾಗಾಗಿ ಯಾವುದೇ ಸಂಘ ಸಂಸ್ಥೆಗಳು ನಡೆಸುವ ಕಾರ್ಯ ಚಟುವಟಿಕೆಗಳ ಕುರಿತು ಪರಿಶೀಲನೆ ನಡೆಸಬಹುದು. ಸಂಘ ಸಂಸ್ಥೆಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಬಹುದು. ಕೆಲವೊಂದು ಚಟುವಟಿಕೆಗಳನ್ನು ನಡೆಸಲು ಪರವಾನಿಗೆ ಅಗತ್ಯ ಇರುವುದಿಲ್ಲ. ಈ ಕುರಿತು ಪೊಲೀಸ್ ಅಧಿಕಾರಿಗಳು ತಿಳಿದಿರಬೇಕು. ಬದಲಾಗಿ ಸಂಘ ಸಂಸ್ಥೆಗ ಆಡಳಿತ ಮಂಡಳಿಯವರಿಗೆ ಅನಗತ್ಯ ತೊಂದರೆ ಕೊಡುವುದು ಸರಿಯಲ್ಲ. ಬದಲಾಗಿ ಅವರಿಗೆ ಸೂಕ್ತ ಮಾರ್ಗದರ್ಶನ ಮಾಡಿ ಎಂದು ಹೇಳಿದರು.

ಪೊಲೀಸರು ಕಾನೂನು ರೀತಿಯಲ್ಲಿ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಕಾನೂನಿನ ವ್ಯಾಪ್ತಿ ಮೀರಬಾರದು. ಕೆಲವರು ರಾಜಕಾರಣಿಗಳಂತೆ, ಭೂಮಿ ಪರಾಭಾರೆ ಮಾಡುವ ಉದ್ಯಮಿಗಳಂತೆ (ರಿಯಲ್ ಎಸ್ಟೇಟ್) ವರ್ತಿಸುತ್ತಾರೆ. ರಾಜಕಾರಣಿಗಳು, ಉದ್ಯಮಿಗಳಿಗೂ ನಿಮಗೂ ವ್ಯತ್ಯಾಸವಿದೆ. ಹಾಗಾಗಿ ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಆ ಮೂಲಕ ನೊಂದವರ ಕಣ್ಣೀರು ಹೊರೆಸುವ ಕೆಲಸವಾಗಬೇಕು. ನೀವು ಮಾಡುವ ಕೆಲಸ ನಿಮ್ಮ ಮಕ್ಕಳಿಗೆ ಮಾದರಿಯಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಕೆ.ಬಿ.ಗೀತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ಜಿ.ಪಂ. ಉಪ ಕಾರ್ಯದರ್ಶಿ ತಿಮ್ಮಪ್ಪ ಮತ್ತಿತರರು ವೇದಿಕೆಯಲ್ಲಿ ಹಾಜರಿದ್ದರು. ನಿವೃತ್ತ ಜಿಲ್ಲಾ ನ್ಯಾಯಾಧೀಶರು ಹಾಗೂ ಸಂಪನ್ಮೂಲ ವ್ಯಕ್ತಿ ಎಸ್.ಆರ್.ಸೋಮಶೇಖರ್ ಅಪರಾಧ ಪ್ರಕ್ರಿಯಾ ಸಂಹಿತೆ ಹಾಗೂ ಎನ್.ಡಿ.ಪಿ.ಎಸ್ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ನ್ಯಾಯಾಂಗ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು, ನೌಕರರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!