ಹೊಸದಿಗಂತ ವರದಿ ವಿಜಯಪುರ:
ನಗರ ಹೊರ ಭಾಗದ ಬಡಾವಣೆಗಳಲ್ಲಿ ದರೋಡೆಗೆ ಯತ್ನಿಸಿದ ಮುಸುಕುಧಾರಿ ಕಳ್ಳರ ಗ್ಯಾಂಗ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದು, ಕಾಲಿಗೆ ಗುಂಡು ತಗುಲಿ ಓರ್ವ ಸಿಕ್ಕಿ ಬಿದ್ದಿದ್ದರೆ, ನಾಲ್ವರು ಓಡಿ ಹೋಗಿರುವ ಘಟನೆ ನಡೆದಿದೆ.
ನಗರ ಹೊರ ವಲಯದ ಟೋಲ್ ಗೇಟ್ ಬಳಿ ಶುಕ್ರವಾರ ಬೆಳಗ್ಗಿನ ಜಾವ ಈ ಘಟನೆ ನಡೆದಿದ್ದು, ಕಾಲಿಗೆ ಗುಂಡು ತಗುಲಿದ ದರೋಡೋಕೋರನನ್ನು ಮಧ್ಯಪ್ರದೇಶದ ಮಹೇಶ ಎಂದು ಗುರುತಿಸಲಾಗಿದ್ದು, ವಶಕ್ಕೆ ಪಡೆದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯಪ್ರದೇಶ ಮೂಲದ ಈ ದರೋಡೆಕೋರರು ನಗರ ಹೊರ ವಲಯದ ಜೈನಾಪೂರ ಪುನರ್ವಸತಿ ಕೇಂದ್ರದ ಬಡಾವಣೆಯ ಮನೆಯೊಂದಕ್ಕೆ ರಾತ್ರಿ ನುಗ್ಗಿ ಮನೆಯವರ ಮೇಲೆ ಹಲ್ಲೆ ನಡೆಸಿ ದರೋಡೆಗೆ ವಿಫಲ ಯತ್ನ ನಡೆಸಿದ್ದರು. ಈ ಘಟನೆಯಲ್ಲಿ ಮನೆ ಮಾಲೀಕ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ.
ಖಚಿತ ಮಾಹಿತಿ ಆಧರಿಸಿದ ಪೊಲೀಸರು ದರೋಡೆಕೋರರನ್ನು ಬೆನ್ನತ್ತಿದ್ದ ವೇಳೆ ಗೋಳಗುಮ್ಮಟ ಪೊಲೀಸ್ ಠಾಣೆ ಸಿಪಿಐ ಮಲ್ಲಯ್ಯ ಮಠಪತಿ ಅವರು 5 ಸುತ್ತು ಗುಂಡು ಹಾರಿಸಿದ್ದಾರೆ. ಆದಾಗ್ಯೂ ನಾಲ್ಕು ದರೋಡೆಕೋರರು ಕತ್ತಲೆಯಲ್ಲಿ ಪರಾರಿಯಾಗಿದ್ದಾರೆ.
ದರೋಡೆಕೋರರು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಮನೆ ಹಾಗೂ ದರೋಡೆಕೋರರ ಮೇಲೆ ಪೊಲೀಸರು ಗುಂಡೇಟು ನಡೆಸಿದ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ರಾಮನಗೌಡ ಹಟ್ಟಿ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ದರೋಡೆಕೋರರ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದ್ದು, ಶೀಘ್ರದಲ್ಲಿಯೇ ಪರಾರಿಯಾದ ದರೋಡೆಕೋರರನ್ನು ಪತ್ತೆ ಹಚ್ಚಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.