ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು-ಕಾಶ್ಮೀರದಲ್ಲಿ ಬಾರಾಮುಲ್ಲಾದಲ್ಲಿ (Baramulla) ಉಗ್ರರು ಪೊಲೀಸ್ ಅಧಿಕಾರಿಯೊಬ್ಬರನ್ನು ಹತ್ಯೆಗೈದಿದ್ದಾರೆ. ಇದರೊಂದಿಗೆ ಕಳೆದ ಮೂರು ದಿನದಲ್ಲಿ ನಿಗದಿತ ವ್ಯಕ್ತಿಗಳ ಮೇಲೆ ದಾಳಿ ನಡೆಸಿ ಉಗ್ರರು ಮೂವರನ್ನು ಹತ್ಯೆಗೈದಂತಾಗಿದೆ.
ಬಾರಾಮುಲ್ಲಾ ಜಿಲ್ಲೆಯ ಕ್ರಾಲ್‌ಪೊರಾ ಗ್ರಾಮದಲ್ಲಿರುವ ಮನೆಯಲ್ಲಿದ್ದಾಗ ಉಗ್ರರು ಪೊಲೀಸ್ ಅಧಿಕಾರಿಯ ಮನೆಗೆ ನುಗ್ಗಿ, ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರ ಗುಂಡಿನ ದಾಳಿಗೆ ಬಲಿಯಾದ ಪೊಲೀಸ್ ಅಧಿಕಾರಿಯನ್ನು (ಪೇದೆ) ಗುಲಾಂ ಮೊಹಮ್ಮದ್ ದರ್) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಗುಲಾಂ ಮೊಹಮ್ಮದ್ ದರ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಹಿರಿಯ ಪೊಲೀಸ್ ಸಿಬ್ಬಂದಿ ಗುಲಾಂ ಮೊಹಮ್ಮದ್ ದರ್ ಅವರ ಮನೆಯ ಮೇಲೆ ಉಗ್ರರು ದಾಳಿ ನಡೆಸಿದ ವಿಷಯ ತಿಳಿಯುತ್ತಲೇ ಭದ್ರತಾ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿದ್ದು, ಉಗ್ರರಿಗಾಗಿ ಶೋಧ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ‘ವೈಲೂ ಕ್ರಾಲ್‌ಪೊರಾ ಗ್ರಾಮದಲ್ಲಿ ಮುಖ್ಯ ಸಿಬ್ಬಂದಿ ಗುಲಾಂ ಮೊಹಮ್ಮದ್ ದರ್ ಅವರ ಮನೆ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ’ ಎಂದು ‘ಕಾಶ್ಮೀರ ಜೋನ್’ ಪೊಲೀಸ್ ಪೋಸ್ಟ್ ಮಾಡಿದೆ.
ಜಮ್ಮು-ಕಾಶ್ಮೀರದಲ್ಲಿ ಬೇರೆ ರಾಜ್ಯದವರು, ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಿ ಸತತ ಮೂರು ದಿನಗಳಿಂದ ದಾಳಿ ನಡೆಸಲಾಗುತ್ತಿದೆ. ಭಾನುವಾರ (ಅಕ್ಟೋಬರ್ 29) ಶ್ರೀನಗರದಲ್ಲಿ ಮಸೂರ್ ಅಹ್ಮದ್ ವಾನಿ ಎಂಬ ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ಉಗ್ರರು ಹತ್ಯೆ ಮಾಡಿದ್ದರು. ಸೋಮವಾರ (ಅಕ್ಟೋಬರ್ 30) ಪುಲ್ವಾಮ ಜಿಲ್ಲೆಯಲ್ಲಿ ಉಗ್ರರು ಉತ್ತರ ಪ್ರದೇಶ ಮೂಲದ ಕಾರ್ಮಿಕರೊಬ್ಬರನ್ನು ಗುಂಡಿಕ್ಕಿ ಕೊಂದಿದ್ದರು. ಈಗ ಮತ್ತೊಬ್ಬ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ್ದಾರೆ.