ಜೀವದ ಹಂಗು ತೊರೆದು ಮಗುವನ್ನು ರಕ್ಷಿಸಿದ ಪೊಲೀಸ್: ಫೋಟೋ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ರಾಜಸ್ಥಾನದ ಹಿಂಸಾಚಾರ ಪೀಡಿತ ಕರೌಲಿಯಲ್ಲಿ ನಡೆದ ಕೋಮುಗಲಭೆಯ ಸಂದರ್ಭದಲ್ಲಿ ಶಿಶುವನ್ನು ಪೊಲೀಸ್ ಕಾನ್​ಸ್ಟೆಬಲ್ ರಕ್ಷಿಸಿದ್ದು, ಇದೀಗ ಈ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ರಾಜಸ್ಥಾನದ ಪೊಲೀಸ್ ಕಾನ್​ಸ್ಟೆಬಲ್ ಜೀವದ ಹಂಗು ತೊರೆದು ಗಲಭೆಕೋರರು ಬೆಂಕಿ ಹಚ್ಚಿದ ಸುಡುವ ಕಟ್ಟಡಗಳ ಹಿಂದೆ ಕಿರಿದಾದ ಕಾಲುದಾರಿಗಳ ಮೂಲಕ ಓಡುತ್ತಿದ್ದಾಗ ಅಳುತ್ತಾ ನಿಂತಿದ್ದ ಮಗುವನ್ನು ರಕ್ಷಿಸಿದ್ದಾರೆ.
ಹೊಸ ವರ್ಷ ಯುಗಾದಿಯನ್ನು ಆಚರಿಸಲು ಕರೌಲಿಯಲ್ಲಿ ಮೋಟಾರ್ ಸೈಕಲ್ ರ್‍ಯಾಲಿ ಮಾಡುವ ವೇಳೆ ಮುಸ್ಲಿಂ ಗಲ್ಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ತಕ್ಷಣ ಸ್ಥಳೀಯ ಅಂಗಡಿಗಳಿಗೆ ಬೆಂಕಿ ಹಚ್ಚಲಾಯಿತು. ಪೊಲೀಸರು ಬೆಂಕಿಯನ್ನು ನಂದಿಸುವಲ್ಲಿ ಮತ್ತು ಜನರನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾದರು. ಈ ವೇಳೆ ಎರಡು ಅಂಗಡಿಗಳ ಮಧ್ಯದಲ್ಲಿ ಉರಿಯುತ್ತಿರುವ ಬೆಂಕಿಯಲ್ಲಿ ಇಬ್ಬರು-ಮೂರು ಮಹಿಳೆಯರು ಸಿಕ್ಕಿಹಾಕಿಕೊಂಡಿರುವುದನ್ನು ಶರ್ಮಾ ನೋಡಿದ್ದಾರೆ.
ಸಿಕ್ಕಿಕೊಂಡಿದ್ದ ಮಹಿಳೆಯರ ಒಬ್ಬರ ಕೈಯಲ್ಲಿ ಮಗು ನೋಡಿದ ಶರ್ಮಾ ಮನೆಗೆ ನುಗ್ಗಿದ್ದಾರೆ. ಕೂಡಲೇ ಮಗುವನ್ನು ಎತ್ತುಕೊಂಡು ಹೊರಗೆ ಓಡಿ ಬಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋವನ್ನು ಶೇರ್ ಮಾಡಲಾಗಿದ್ದು, ಜೊತೆಗೆ ಅವರ ಮಹತ್ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
‘ಬೆಂಕಿಯ ಜ್ವಾಲೆ ಹೊರಹೋಗುವ ದಾರಿಯನ್ನು ಆವರಿಸುತ್ತಿದ್ದಂತೆ ಮಹಿಳೆಯರು ನನಗೆ ಸಹಾಯ ಮಾಡುವಂತೆ ಬೇಡಿಕೊಂಡರು. ನಾನು ಒಳಹೋಗಿ ಶಾಲು ಹೊದಿಸಿದ ಮಗುವನ್ನು ನನಗೆ ಕೊಡಲು ಹೇಳಿದೆ. ನಾನು ಮಗುವನ್ನು ನನ್ನ ತೋಳುಗಳಲ್ಲಿ ತೆಗೆದುಕೊಂಡು ತಾಯಿ ಮತ್ತು ಇತರ ಮಹಿಳೆಯರಿಗೆ ನನ್ನ ಹಿಂದೆ ಹಿಂಬಾಲಿಸಲು ಹೇಳಿದೆ. ತಕ್ಷಣ ನಾನು ಹೊರ ಓಡಿ ಬಂದೆ’ ಎಂದು ಪೊಲೀಸರ ಕಾನ್‌ಸ್ಟೆಬಲ್ ನೇತ್ರೇಶ್ ಶರ್ಮಾ ಹೇಳಿದ್ದಾರೆ.
ರಾಜಸ್ಥಾನದ ಕರೌಲಿಯಲ್ಲಿ ಧಾರ್ಮಿಕ ಮೆರವಣಿಗೆಯ ಭಾಗವಾಗಿ ಮೋಟಾರ್‌ಸೈಕಲ್ ರ್ಯಾಲಿಯ ಮೇಲೆ ಕೆಲವು ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದರಿಂದ ನಾಲ್ವರು ಪೊಲೀಸ್ ಸಿಬ್ಬಂದಿ ಸೇರಿದಂತೆ ಕನಿಷ್ಠ 42 ಜನರು ಗಾಯಗೊಂಡಿದ್ದಾರೆ.
ಟ್ವಿಟ್ಟರ್‌ನಲ್ಲಿ ಶೌರ್ಯ ಪ್ರಶಸ್ತಿಗೆ ಒತ್ತಾಯ
ಇನ್ನು ಟ್ವಿಟ್ಟರ್‌ನಲ್ಲಿ ಬಳಕೆದಾರರು ಧೈರ್ಯಶಾಲಿ ಕಾನ್ಸ್‌ಟೇಬಲ್‌ಗೆ ವಂದನೆ ಸಲ್ಲಿಸುತ್ತಿದ್ದಾರೆ ಮತ್ತು ಅವರಿಗೆ ಶೌರ್ಯ ಪ್ರಶಸ್ತಿಯನ್ನು ನೀಡಬೇಕು ಎಂದು ಕೋರುತ್ತಿದ್ದಾರೆ. ಮಗುವನ್ನು ರಕ್ಷಿಸಲು ತನ್ನ ಪ್ರಾಣದ ಹಂಗು ತೊರೆದ ಈ ವೀರ ಯೋಧನಿಗೆ ಹೃತ್ಪೂರ್ವಕ ವಂದನೆಗಳು. ಈ ವೀರ ಯೋಧನಿಗೆ ಪ್ರಶಸ್ತಿ ನೀಡಬೇಕು ಎಂದು ನಾನು ವಿನಂತಿಸುತ್ತೇನೆ ಎಂದು ಬಳಕೆದಾರರು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!