ಹೊಸದಿಗಂತ ಡಿಜಿಟಲ್ ಡೆಸ್ಕ್:
ನದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ತೇಲುತ್ತಿದ್ದ ವ್ಯಕ್ತಿಯನ್ನು ಇಬ್ಬರು ಪೊಲೀಸ್ ಸಿಬ್ಬಂದಿ ಸಾರ್ವಜನಿಕರ ಸಹಾಯದಿಂದ ರಕ್ಷಿಸಿರುವ ಘಟನೆ ಶಿವಮೊಗ್ಗದಲ್ಲಿ ವರದಿಯಾಗಿದೆ.
ಸೋಮವಾರ ಬೆಳಗ್ಗೆ ಶಿವಮೊಗ್ಗದ ತೀರ್ಥಹಳ್ಳಿ ಪೊಲೀಸ್ ವ್ಯಾಪ್ತಿಯ ಸಂಕದಹೊಳೆ ಗ್ರಾಮದ ಬಳಿ ನದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ತೇಲುತ್ತಿದ್ದ ವ್ಯಕ್ತಿಯನ್ನು ಇಬ್ಬರು ಪೊಲೀಸ್ ಸಿಬ್ಬಂದಿ ಸಾರ್ವಜನಿಕರ ಸಹಾಯದಿಂದ ರಕ್ಷಿಸಿದ್ದಾರೆ.
ಬೆಳಗ್ಗೆ 8 ಗಂಟೆ ಸುಮಾರಿಗೆ ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಂ (ಇಆರ್‌ಎಸ್‌ಎಸ್)-112 ಸಹಾಯವಾಣಿಗೆ ಕರೆಯೊಂದು ಬಂದಿದ್ದು, ನೀರಿನಲ್ಲಿ ಮೃತದೇಹವೊಂದು ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದ ಕೂಡಲೇ ಶಿವಮೊಗ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಹಾಯಕ ಹೆಡ್‌ಕಾನ್ಸ್‌ಟೇಬಲ್ ಲೋಕೇಶ್, ಆಗುಂಬೆ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಸಾದತ್ ತಕ್ಷಣ ಸ್ಪಂದಿಸಿ ಸ್ಥಳಕ್ಕೆ ದೌಡಾಯಿಸಿದರು.
ಈ ವೇಳೆ ನದಿಗಿಳಿದ ಸಿಬ್ಬಂದಿ ನದಿಯಲ್ಲಿ ತೇಲುತ್ತಿದ್ದ ವ್ಯಕ್ತಿಯನ್ನು ಪರೀಕ್ಷಿಸಿದ್ದು, ಈ ವೇಳೆ ಆತ ಬದುಕಿದ್ದು, ಪ್ರಜ್ಞಾಹೀನನಾಗಿದ್ದಾನೆ ಎಂದು ಮನಗಂಡಿದ್ದಾರೆ.
ಕೂಡಲೇ ಆತನನ್ನು ಸುಮಾರು 1 ಕಿ.ಮೀ ದೂರದವರೆಗೂ ನದಿಯಲ್ಲಿ ಎಳೆದುಕೊಂಡು ಬಂದು ನೀರಿನಿಂದ ಹೊರಗೆಳೆದಿದ್ದಾರೆ. ಬಳಿಕ ಆತನಿಗೆ ಘಟನಾ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ನಂತರ ತೀರ್ಥಹಳ್ಳಿಯ ಶ್ರೀ ಜಯಚಾಮರಾಜೇಂದ್ರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.