ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾರದ ಹಿಂದೆ ಗರ್ಭಿಣಿ ಹಸುವನ್ನು ಬರ್ಬರವಾಗಿ ಕೊಂದ ಘಟನೆಗೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸರು ಶನಿವಾರ ಫೈಸಲ್ ಎಂಬ ಶಂಕಿತನನ್ನು ಬಂಧಿಸಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡು ಹಾರಿಸಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ಹೊನ್ನಾವರ ತಾಲ್ಲೂಕಿನ ಕಾಸರಕೋಡು ಬಳಿಯ ದುಗ್ಗೂರ್ ಕ್ರಾಸ್‌ನಲ್ಲಿ ಫೈಸಲ್ ನನ್ನು ತಡೆದ ಪೊಲೀಸರು ಆತನನ್ನು ಬಂಧಿಸಿದರು. ಬಂಧಿತ ಈರೋಪಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾಗ, ತಪ್ಪಿಸಿಕೊಳ್ಳಲು ಯತ್ನಿಸಿ ಹೊನ್ನಾವರದ ಪೊಲೀಸ್ ಇನ್ಸ್‌ಪೆಕ್ಟರ್ ಸಿದ್ಧರಾಮೇಶ್ವರ, ಸಬ್ ಇನ್ಸ್‌ಪೆಕ್ಟರ್ ರಾಜಶೇಖರ್ ವಂದಲಿ, ಕಾನ್‌ಸ್ಟೆಬಲ್‌ಗಳಾದ ಗಜಾನನ್ ನಾಯಕ್ ಮತ್ತು ಗಣೇಶ್ ಬದ್ನಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಪ್ರಕರಣದಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ರಕ್ಷಣೆಗಾಗಿ ಗುಂಡು ಹಾರಿಸಿ ಫೈಸಲ್ ನನ್ನು ಸೆರೆ ಹಿಡಿದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ನಂತರ ಆರೋಪಿಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಟೊಂಕ ನಿವಾಸಿಯಾದ ಈತ ಮತ್ತು ಅವನ ಸಹಚರರು ಹೊನ್ನಾವರದ ಸಾಲ್ಕೋಡ್ ಗ್ರಾಮ ಪಂಚಾಯತ್‌ನ ಕೊಂಡುಕುಳಿ ಗ್ರಾಮದಲ್ಲಿ ಗರ್ಭಿಣಿ ಹಸುವನ್ನು ಕೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಸು ಕೃಷ್ಣ ಆಚಾರಿ ಎಂಬುವರಿಗೆ ಸೇರಿದ್ದಾಗಿದೆ. ದುರದೃಷ್ಟಕರ ಘಟನೆ ನಡೆದ ದಿನದಂದು ಹಸು ಮೇಯಲು ಹೋಗಿತ್ತು, ಸಂಜೆಯಾದರೂ ಅದು ಹಿಂತಿರುಗಲಿಲ್ಲ ಮತ್ತು ಮರುದಿನ ಆಚಾರಿ ಅದನ್ನು ಹುಡುಕಲು ಹೋದಾಗ ಹತ್ಯೆಯಾಗಿರುವುದು ಕಂಡುಬಂದಿತು. ದುಷ್ಕರ್ಮಿಗಳು ಹಸುವಿನ ಕತ್ತರಿಸಿದ ತಲೆ ಮತ್ತು ಕಾಲುಗಳನ್ನು ಸ್ಥಳದಲ್ಲೇ ಬಿಟ್ಟು, ಹೊಟ್ಟೆಯಲ್ಲಿದ್ದ ಕರುವನ್ನು ಎಸೆದಿದ್ದರು.
ಪೊಲೀಸರ ಪ್ರಕಾರ, ಆರೋಪಿ ಮತ್ತು ಅವನ ಸಹಚರರು ನಂತರ ಮದುವೆ ಕಾರ್ಯಕ್ರಮಕ್ಕಾಗಿ ಹಸುವಿನ ಮಾಂಸ ಪೂರೈಸಿದರು. ಫೈಸಲ್ ನನ್ನು ಶನಿವಾರ ಬಂಧಿಸಲಾಯಿತು, ಆದರೆ ಅವನ ಸಹಚರರಲ್ಲಿ ಒಬ್ಬನಾದ ತೌಸೀಫ್‌ನನ್ನು ಜನವರಿ 24 ರಂದು ಬಂಧಿಸಲಾಯಿತು.
ಅಪರಾಧಿಗಳನ್ನು ಬಂಧಿಸಲು ಪೊಲೀಸರು ಆರು ತಂಡಗಳನ್ನು ರಚಿಸಿದ್ದರು, ಪ್ರತಿ ತಂಡಕ್ಕೂ ಹಿರಿಯ ಅಧಿಕಾರಿ ನೇತೃತ್ವ ವಹಿಸಿದ್ದರು. ತನಿಖೆಯನ್ನು ಉತ್ತರ ಕನ್ನಡ ಜಿಲ್ಲೆಯ ಎಸ್‌ಪಿ ಎಂ ನಾರಾಯಣ ಮೇಲ್ವಿಚಾರಣೆ ಮಾಡಿದರು ಎಂದು ತಿಳಿದು ಬಂದಿದೆ.