Tuesday, February 27, 2024

ಲೈಂಗಿಕ ಕಾರ್ಯಕರ್ತರಿಗೆ ಕಿರುಕುಳ ನೀಡದಂತೆ ಮಾಧ್ಯಮ ಮತ್ತು ಪೊಲೀಸರಿಗೆ ಸುಪ್ರೀಂ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ವಯಂಪ್ರೇರಿತ ವೇಶ್ಯಾವಾಟಿಕೆ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಲೈಂಗಿಕ ಕಾರ್ಯಕರ್ತೆಯರಿಗೆ ಯಾವುದೇ ರೀತಿಯ ಕಿರುಕುಳ ನೀಡದಂತೆ ಪೊಲೀಸರು ಮತ್ತು ಮಾಧ್ಯಮಗಳಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪೊಲೀಸರು ಮತ್ತು ಮಾಧ್ಯಮಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ನೀಡಿದೆ. ಲೈಂಗಿಕ ಕಾರ್ಯಕರ್ತೆಯರ ವೇಶ್ಯಾವಾಟಿಕೆ ಮೇಲಿನ ದಾಳಿ ವೇಳೆ ಸೆರೆಹಿಡಿದ ಲೈಂಗಿಕ ಕಾರ್ಯಕರ್ತೆಯರ ಫೋಟೋಗಳನ್ನು ಮಾಧ್ಯಮಗಳು ಯಾವುದೇ ಸಂದರ್ಭದಲ್ಲೂ ಪ್ರಸಾರ ಮಾಡದಂತೆ ನ್ಯಾಯಮೂರ್ತಿ ಬಿ.ಆರ್.ಗವಾಯಿ, ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಮತ್ತು ನ್ಯಾಯಮೂರ್ತಿ ಲಾವು ನಾಗೇಶ್ವರ ರಾವ್ ಅವರನ್ನೊಳಗೊಂಡ ಪೀಠ ತಾಕೀತು ಮಾಡಿದೆ. ಎಲ್ಲರಂತೆ ಲೈಂಗಿಕ ಕಾರ್ಯಕರ್ತೆಯರಿಗೂ ಕನಿಷ್ಠ ಗೌರವ ಶಿಷ್ಟಾಚಾರ ನೀಡಬೇಕು ಎಂದು ಸುಪ್ರೀಂ ಸೂಚಿಸಿದೆ.

ಆರ್ಟಿಕಲ್ 142 ರ ಆಧಾರದ ಮೇಲೆ ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಭಾರತೀಯ ಪತ್ರಿಕಾ ಮಂಡಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಲೈಂಗಿಕ ಕಾರ್ಯಕರ್ತೆಯರ ಕುರಿತು ನೇಮಕಗೊಂಡ ಸಮಿತಿ ನೀಡಿದ ಪ್ರಮುಖ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಲೈಂಗಿಕ ಕಾರ್ಯಕರ್ತೆಯರ ಮೇಲಿನ ಶಿಫಾರಸುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಸಮಿತಿಯ ಶಿಫಾರಸುಗಳು..

– ಸ್ವಯಂಪ್ರೇರಿತ ವೇಶ್ಯಾವಾಟಿಕೆ ಅಪರಾಧವಲ್ಲ, ಆದರೆ ವೇಶ್ಯಾಗೃಹಗಳನ್ನು ನಡೆಸುವುದು ಕಾನೂನುಬಾಹಿರ.
– ಯಾವುದೇ ಲೈಂಗಿಕ ಕಾರ್ಯಕರ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ಅವರಿಗೆ ಎಲ್ಲರಂತೆ ಸೌಲಭ್ಯ ಕಲ್ಪಿಸಬೇಕು.
– CRPC ಯ ಸೆಕ್ಷನ್ 357C ಅವರಿಗೆ ತಕ್ಷಣದ ವೈದ್ಯಕೀಯ ಆರೈಕೆಯನ್ನು ಒದಗಿಬೇಕು.
– ರಾಜ್ಯ ಸರ್ಕಾರಗಳು ವಿಶೇಷವಾಗಿ ಎಲ್ಲಾ ಐಟಿಪಿಎ (ಅನೈತಿಕ ಕಳ್ಳಸಾಗಣೆ ತಡೆ ಕಾಯ್ದೆ) ಕೇರ್ ಹೋಮ್‌ಗಳಲ್ಲಿ ಸಮೀಕ್ಷೆಯನ್ನು ನಡೆಸಬೇಕು.
– ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ಪೊಲೀಸರ ವರ್ತನೆ ಕ್ರೂರ ಮತ್ತು ಹಿಂಸಾತ್ಮಕವಾಗಿದೆ ಅದು ಕೊನೆಯಾಗಬೇಕು
– ಲೈಂಗಿಕ ಕಾರ್ಯಕರ್ತೆಯರು ಇತರ ನಾಗರಿಕರಿಗೆ ಸಮಾನವಾದ ಸಾಂವಿಧಾನಿಕ ಮೂಲಭೂತ ಹಕ್ಕುಗಳನ್ನು ಹೊಂದಿದ್ದಾರೆ ಎಂಬುದನ್ನು ಗುರುತಿಸಬೇಕು.
– ಲೈಂಗಿಕ ಕಾರ್ಯಕರ್ತೆಯರ ಫೋಟೋಗಳು ಮತ್ತು ವಿವರಗಳನ್ನು ಬಹಿರಂಗಪಡಿಸಬಾರದು. ಈ ನಿಟ್ಟಿನಲ್ಲಿ ಮಾಧ್ಯಮಗಳು ಮುಂಜಾಗ್ರತೆ ವಹಿಸಬೇಕು.
– ಲೈಂಗಿಕ ಕಾರ್ಯಕರ್ತರ ಬಳಿ ಕಾಂಡೋಮ್‌ ದೊರೆತರೆ ಅದನ್ನು ಅವರ ಆರೋಗ್ಯ ಅಥವಾ ಸುರಕ್ಷತೆಯ ಆಧಾರದ ಮೇಲೆ ಅಪರಾಧ ಎಂದು ಪರಿಗಣಿಸಬಾರದು.
– ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಷ್ಟ್ರೀಯ ಮತ್ತು ರಾಜ್ಯ ನ್ಯಾಯಾಂಗ ಪ್ರಾಧಿಕಾರಗಳ ಮೂಲಕ ಲೈಂಗಿಕ ಕಾರ್ಯಕರ್ತರಿಗಾಗಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
– ಹಕ್ಕುಗಳು, ನ್ಯಾಯಸಮ್ಮತತೆ, ಪೊಲೀಸ್ ಜವಾಬ್ದಾರಿಗಳು, ಅಧಿಕಾರಗಳು, ಕಾನೂನು ಏನು ಅನುಮತಿಸುತ್ತದೆ? ಯಾವುದನ್ನು ನಿಷೇಧಿಸಲಾಗಿದೆ ಎಂಬುದರ ಬಗ್ಗೆ ಅರಿವು ಮೂಡಿಸುವುದು.
– UIDAI ನೀಡಿದ ಪ್ರೊಫಾರ್ಮಾ ಪ್ರಮಾಣಪತ್ರದ ಆಧಾರದ ಮೇಲೆ ಎಲ್ಲಾ ಲೈಂಗಿಕ ಕಾರ್ಯಕರ್ತರಿಗೆ ಆಧಾರ್ ಕಾರ್ಡ್ ನೀಡಬೇಕು.
– ಅವರ ವಿವರಗಳನ್ನು ನಮೂದಿಸುವಾಗ ಎಲ್ಲಿಯೂ ಅವರನ್ನು ಲೈಂಗಿಕ ಕಾರ್ಯಕರ್ತೆ ಎಂದು ನಮೂದಿಸಬಾರದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!