ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್ಗೆ ಜಾಮೀನು ದೊರೆತಿದೆ. ನಿನ್ನೆಯಷ್ಟೆ ನಾಂಪಲ್ಲಿ ನ್ಯಾಯಾಲಯಕ್ಕೆ ಭೇಟಿ ನೀಡಿದ್ದ ಅಲ್ಲು ಅರ್ಜುನ್ ಷರತ್ತುಗಳನ್ನು ಪೂರೈಸಿ ಜಾಮೀನು ಪಡೆದಿದ್ದಾರೆ.
ಇದಾದ ಬಳಿಕ ಸಂಧ್ಯಾ ಥಿಯೇಟರ್ ಕಾಲ್ತುಳಿತದಲ್ಲಿ ಗಾಯಗೊಂಡಿರುವ ಬಾಲಕನ ಭೇಟಿಗೆ ಅಲ್ಲು ಅರ್ಜುನ್ ಪ್ರಯತ್ನಿಸಿದ್ದು, ಅದಕ್ಕೆ ಪೊಲೀಸರು ಅಡ್ಡಗಾಲು ಹಾಕುತ್ತಿದ್ದಾರೆ.
ಸಂಧ್ಯಾ ಥಿಯೇಟರ್ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ನಿಧನ ಹೊಂದಿದ್ದು ಅವರ ಪುತ್ರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾರೆ. ಘಟನೆ ನಡೆದಾಗಿನಿಂದಲೂ ಐಸಿಯುನಲ್ಲಿಯೇ ಇರುವ ಬಾಲಕ ಇನ್ನೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಜೈಲಿನಿಂದ ಹೊರಬಂದ ಬಳಿಕ ಅಲ್ಲು ಅರ್ಜುನ್, ಆ ಬಾಲಕನ ಭೇಟಿಯಾಗಲು ಯತ್ನಿಸಿದ್ದಾರೆ ಆದರೆ ಅದಕ್ಕೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ.
ಬಾಲಕ ದಾಖಲಾಗಿರುವ ಆಸ್ಪತ್ರೆಯು ರಾಂಗೊಪಾಲ್ ನಗರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತಿದ್ದು, ರಾಂಗೊಪಾಲ್ ನಗರ ಪೊಲೀಸರು ಅಲ್ಲು ಅರ್ಜುನ್ ಬಾಲಕನ ಭೇಟಿಗೆ ಆಸ್ಪತ್ರೆಗೆ ಬರಬಾರದು ಎಂದು ನೊಟೀಸ್ ನೀಡಿದ್ದಾರೆ. ಅಲ್ಲು ಅರ್ಜುನ್ ಆಸ್ಪತ್ರೆಗೆ ಬಂದರೆ ಜನ ಜಂಗುಳಿ ಹೆಚ್ಚಾಗುತ್ತದೆ. ನೂಕಾಟ-ತಳ್ಳಾಟ ಉಂಟಾಗಬಹುದು, ಇದರಿಂದ ಇತರೆ ರೋಗಿಗಳಿಗೆ ಸಮಸ್ಯೆ ಆಗುತ್ತದೆ ಎಂಬ ಕಾರಣ ನೀಡಿ ಅಲ್ಲು ಅರ್ಜುನ್, ಆ ಗಾಯಗೊಂಡ ಬಾಲಕನನ್ನು ಭೇಟಿ ಆಗದಂತೆ ತಡೆದಿದ್ದಾರೆ ಪೊಲೀಸರು.
ಅಸಲಿಗೆ ಈ ಮೊದಲು ಅಲ್ಲು ಅರ್ಜುನ್ ವಿಷಯವನ್ನು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹಾಗೂ ಇತರೆ ಸಚಿವರು ವಿಧಾನಸಭೆಯಲ್ಲಿ ಮಾತನಾಡಿದಾಗ ಅಲ್ಲು ಅರ್ಜುನ್, ಆ ಗಾಯಗೊಂಡ ಬಾಲಕನನ್ನು ಮಾತನಾಡಿಸಲಿಲ್ಲ ಎಂದು ಒತ್ತಿ ಒತ್ತಿ ಹೇಳಿದ್ದರು. ಆದರೆ ಈಗ ಸ್ವತಃ ಅಲ್ಲು ಅರ್ಜುನ್ ಆ ಬಾಲಕನನ್ನು ಭೇಟಿ ಆಗುತ್ತೀನಿ ಎಂದು ಹೇಳುತ್ತಿರುವಾಗ ಪೊಲೀಸರು ಅದನ್ನು ತಡೆಯುತ್ತಿದ್ದಾರೆ.