ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಮವಾರ ಉಡುಪಿ ಜಿಲ್ಲೆಯ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಬಿಜೆಪಿಯ ಹಿರಿಯ ಮುತ್ಸದ್ದಿ, ಮಾಜಿ ಶಾಸಕ ಎ.ಜಿ. ಕೊಡ್ಗಿ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ತಾಲ್ಲೂಕಿನ ಅಮಾಸೆಬೈಲಿನ ಕೊಡ್ಗಿಯವರ ಸ್ವಗೃಹದ ಸಮೀಪದ ತೋಟದಲ್ಲಿ ಮಂಗಳವಾರ ಮಧ್ಯಾಹ್ನ ನಡೆಯಿತು.
ಸೋಮವಾರ ರಾತ್ರಿ ಮೃತದೇಹವನ್ನು ಅಮಾಸೆಬೈಲಿನಲ್ಲಿರುವ ಅವರ ಮನೆಗೆ ತರಲಾಗಿದ್ದು, ಮಂಗಳವಾರ ಬೆಳಿಗ್ಗೆ ಮನೆಯ ಸಮೀಪದ ಗೋಕುಲ್ ಗೇರು ಕಾರ್ಖಾನೆಯಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಎಜಿ ಕೊಡ್ಗಿಯವರ ಅಭಿಮಾನಿಗಳು ಹಾಗೂ ಕುಟುಂಬಿಕರು ಸಾವಿರಾರು ಸಂಖ್ಯೆಯಲ್ಲಿ ದರ್ಶನ ಪಡೆದುಕೊಂಡು ಅಂತಿಮ ನಮನಗಳನ್ನು ಸಲ್ಲಿಸಿದರು.
ಸರ್ಕಾರಿ ಗೌರವ
ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಸರ್ಕಾರದ ವತಿಯಿಂದ ಗೌರವ ರಕ್ಷೆ ನೀಡಲಾಯಿತು. ಪೊಲೀಸ್ ಇಲಾಖೆಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವತಿಯಿಂದ ಗಾಳಿಯಲ್ಲಿ 3 ಬಾರಿ ಕುಶಾಲು ತೋಪುಗಳನ್ನು ಸಿಡಿಸಿ ಗೌರವ ರಕ್ಷೆ ನೀಡಲಾಯಿತು. ಮೃತ ದೇಹಕ್ಕೆ ಹೊದಿಸಲಾದ ತ್ರಿವರ್ಣ ಧ್ವಜವನ್ನು ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಕೆ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದರು.
ಮಧ್ಯಾಹ್ನದ ಬಳಿಕ ಮೃತ ದೇಹವನ್ನು ಮೂಲ ಮನೆಗೆ ತೆಗೆದುಕೊಂಡು ಹೋಗಿ, ಕುಟುಂಬದ ಪುರೋಹಿತರ ಮಾರ್ಗದರ್ಶನದಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸಲಾಯಿತು. ಬಳಿಕ ಮನೆಯ ಸಮೀಪದ ತೋಟದಲ್ಲಿ ನಿರ್ಮಿಸಲಾದ ಚಿತೆಯಲ್ಲಿ ಹಿಂದೂ ಬ್ರಾಹ್ಮಣ ಪದ್ಧತಿಯಂತೆ ಅಗ್ನಿಸ್ವರ್ಶ ಮಾಡಿ ಅಂತ್ಯಕ್ರಿಯೆ ನಡೆಸಲಾಯಿತು.
ಮಕ್ಕಳಾದ ಅಶೋಕ ಕುಮಾರ ಕೊಡ್ಗಿ, ಕಿಶೋರಕುಮಾರ ಕೊಡ್ಗಿ( ಕ್ಯಾಂಪ್ಕೋ ಅಧ್ಯಕ್ಷ ), ಆನಂದ ಕೊಡ್ಗಿ, ಕುಮಾರ ಕೊಡ್ಗಿ, ಕಿರಣ್ ಕುಮಾರ ಕೊಡ್ಗಿ ( ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ) , ಪುತ್ರಿ ಶಶಿ, ಸಹೋದರ ಅನಂತಕೃಷ್ಣ ಕೊಡ್ಗಿ ಹಾಗೂ ಕುಟುಂಬಿಕರು ಪಾಲ್ಗೊಂಡಿದ್ದರು.
ಗಣ್ಯರಿಂದ ಅಂತಿಮ ದರುಶನ
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭ ಕರಂದ್ಲಾಜೆ, ಗ್ರೃಹ ಸಚಿವ ಅರಗ ಜ್ಞಾನೇಂದ್ರ, ದ.ಕ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪ್ಚಂದ್ರ ಶೆಟ್ಟಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರಣಿಕ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯ್ಕ್, ಬಿಜೆಪಿ ಮುಖಂಡರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ಕಿರಣ್ ಕುಮಾರ್ ಬೈಲೂರು, ಕರ್ಜೆ ಬಾಲಕೃಷ್ಣ ಶೆಟ್ಟಿ, ಸಂತೋಷ್ ಜತ್ತನ್, ಬೈಂದೂರು ಕ್ಷೇತ್ರ ಅಧ್ಯಕ್ಷ ದೀಪಕ್ ಕುಮಾರ್, ಕುಂದಾಪುರ ಕ್ಷೇತ್ರ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಇಂಧನ ಸಚಿವ ಸುನೀಲ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ಕೊಲ್ಲೂರು ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯೆ ಸಂಧ್ಯಾ ರಮೇಶ್, ಜಿಲ್ಲಾ ಎಸ್.ಪಿ ಎನ್.ವಿಷ್ಣುವರ್ಧನ್, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಉಪಸ್ಥಿತರಿದ್ದರು.