ಲೋನ್ ಆಪ್ ವಂಚನೆ ಪ್ರಕರಣ: ಆರೋಪಿತರು ಮುಂಬೈ ಸೈಬರ್ ಕ್ರೈಂ ಪೊಲೀಸರ ವಶಕ್ಕೆ

ಹೊಸದಿಗಂತ ವರದಿ,ಅಂಕೋಲಾ:

ಮೊಬೈಲ್ ಅಪ್ಲಿಕೇಶನ್ ಮೂಲಕ ಸಾಲ ನೀಡಿ ನಂತರ ನಾನಾ ರೀತಿಯಲ್ಲಿ ಬ್ಲಾಕ್ ಮೇಲ್ ಮಾಡಿ ಮಾನಸಿಕವಾಗಿ ಪಡಿಸುವ ಲೋನ್ ಆಪ್ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಅಂಕೋಲಾ ಮೂಲದ ತರುಣರನ್ನು ಮುಂಬೈ ಸೈಬರ್ ಕ್ರೈಂ ಪೊಲೀಸರು ವಶಕ್ಕೆ ಪಡೆದು ಮುಂಬೈಗೆ ಕರೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ.
ಬಂಧಿತ ತರುಣರು ಲೋನ್ ಆಪ್ ನ ಸಾಲ ಪಡೆದವರ ಮೊಬೈಲ್ ಹ್ಯಾಕ್ ಮಾಡಿ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಕರೆ ಮಾಡಿ ಹಣಕ್ಕಾಗಿ ಮಾನಸಿಕ ಕಿರುಕುಳ ನೀಡುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಆರೋಪಿತರ ಜಾಡನ್ನು ಹಿಡಿದು ಬಂದ ಮುಂಬೈ ಪೊಲೀಸರು ಅಂಕೋಲಾ ತಾಲೂಕಿನ ಸುಹೈಲ್ ಸಯ್ಯದ್ (24) ಸಯ್ಯದ್ ಮಹ್ಮದ ಅತ್ತಾರ್ (24) ಮಹ್ಮದ ಕೈಫ್ ಖಾದ್ರಿ (22) ಮತ್ತು ಮುಪ್ತಿಯಾಜ್ ಫೀರಜಾದೆ ಎನ್ನುವವರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದ್ದು ಅವರ ವಿಚಾರಣೆ ನಡೆಸಿ ಜಾಲದ ಪ್ರಮುಖ ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ.
ಅತಿ ಶೀಘ್ರದಲ್ಲಿ ಸಾಲದ ಆಮಿಷ ಒಡ್ಡುವ ಲೋನ್ ಆಪ್ ಡೌನ್ ಲೋಡ್ ಮಾಡಿಕೊಂಡರೆ ಮೊಬೈಲ್ ಪೋನ್ ನಲ್ಲಿ ಇರುವ ಎಲ್ಲಾ ಮಾಹಿತಿಗಳನ್ನು ಪೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲ ತಾಣಗಳ ಮಾಹಿತಿಯನ್ನು ವಂಚಕರು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ನಂತರ ನಾನಾ ರೀತಿಯಲ್ಲಿ ಹಣಕ್ಕಾಗಿ ಪೀಡಿಸುತ್ತಾರೆ ದೊಡ್ಡ ದೊಡ್ಡ ಮಹಾ ನಗರಗಳಲ್ಲಿ ಲೋನ್ ಆಪ್ ಗೆ ಸಂಬಂಧಿಸಿದಂತೆ ಪ್ರತಿನಿತ್ಯ ಪ್ರಕರಣಗಳು ದಾಖಲಾಗುತ್ತಿವೆ.
ಕೆಲವು ದಿನಗಳ ಹಿಂದೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪ್ರಕಟನೆ ನೀಡಿ ಲೋನ್ ಆಪ್ ವಂಚನಾ ಜಾಲದ ಕುರಿತು ಜಾಗ್ರತೆ ವಹಿಸುವಂತೆ, ಸಾಮಾಜಿಕ ಜಾಲ ತಾಣಗಳಲ್ಲಿ ಕಂಡು ಬರುವ ಲೋನ್ ಆಪ್ ಜಾಹಿರಾತು ಡೌನ್ ಲೋಡ್ ಮಾಡಿಕೊಳ್ಳದಂತೆ ಸೂಚನೆ ನೀಡಲಾಗಿತ್ತು.

ಬಂಧಿತರಲ್ಲಿ ಸುಹೈಲ್ ಸಯ್ಯದ್ ಎಂಬಾತ ಎಂ.ಬಿ.ಎ ಪದವಿದರನಾಗಿದ್ದು ಜಾಲದ ಸುಪ್ರವೈಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ, ಸೈಯದ್ ಅತ್ತಾರ್ ಐ.ಟಿ ಕೋರ್ಸ್, ಮಹ್ಮದ ಖಾದ್ರಿ ಪಿ.ಯು.ಸಿ ಮತ್ತು ಫೀರಜಾದೆ ಬಿ.ಕಾಂ ಪದವಿದರರಾಗಿದ್ದು ಲೋನ್ ಆಪ್ ವಂಚನೆಗೆ ಸಿಲುಕಿದವರ ಮೊಬೈಲ್ ನಲ್ಲಿ ಇರುವ ಪೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಅವರಿಗೆ ಕಳಿಸಿ ಹಣಕ್ಕಾಗಿ ಮಾನಸಿಕ ಹಿಂಸೆ ನೀಡುವ ಆರೋಪದ ಅಡಿಯಲ್ಲಿ ಇವರನ್ನು ಬಂಧಿಸಲಾಗಿದೆ

ಲೋನ್ ಆಪ್ ವಂಚನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರದ ಗೃಹ ಸಚಿವರು ಕಳೆದ 15 ದಿನಗಳ ಹಿಂದೆ ಸೈಬರ್ ಪೊಲೀಸ್ ಅಧಿಕಾರಿಗಳ ಸಭೆ ಕರೆದು ಕಠಿಣ ಕ್ರಮಕ್ಕೆ ಸೂಚಿಸಿದ್ದರು ಪ್ರಕರಣವೊಂದರ ಜಾಡು ಹಿಡಿದ ಸೈಬರ್ ಕ್ರೈಂ ಪೊಲೀಸರು ಧಾರವಾಡದಲ್ಲಿ ಅಹ್ಮದ್ ಹುಸೇನ್ ಎಂಬಾತನನ್ನು ಬಂಧಿಸಿ ಆತನನ್ನು ವಿಚಾರಣೆಗೊಳಪಡಿಸಿ ಅಂಕೋಲಾ ದ ಆರೋಪಿತರನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!