ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ರಾಜಕೀಯದಲ್ಲಿ ಬಿರುಸಿನ ಬೆಳವಣಿಗೆಗಳು ನಡೆಯುತ್ತಿವೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿರುವ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಇದೀಗ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡಿದ್ದು ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಬಿಹಾರದಲ್ಲಿ ಮತ್ತೆ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಲಾಲೂಪ್ರಸಾದ್ ಯಾದವ್ ಅವರ ಆರ್ಜೆಡಿ ಪಕ್ಷಗಳು ಒಂದಾಗಲಿವೆ ಎನ್ನಲಾಗುತ್ತಿದೆ. ಈ ಕುರಿತು ಕೆಲ ಅಂಶಗಳ ಅಪ್ಡೇಟ್ ಇಲ್ಲಿದೆ.
- ಮೈತ್ರಿ ಮುರಿದುಕೊಳ್ಳುವ ಕುರಿತು ತಮ್ಮ ಪಕ್ಷದ ಶಾಸಕರು ಹಾಗೂ ಸಂಸದರ ಸಭೆ ನಡೆಸಿರುವ ನಿತೀಶ್ ಕುಮಾರ್ ರಾಜ್ಯಪಾಲರನ್ನು ಭೇಟಿ ಮಾಡಲು ಸಮಯ ಕೋರಿದ್ದಾರೆ. ಪ್ರತಿಪಕ್ಷದಲ್ಲಿ ಕುಳಿತಿರುವ ಆರ್ಜೆಡಿ ಪಕ್ಷವೂ ಸಹ ತನ್ನ ಶಾಸಕರೊಂದಿಗೆ ಸಭೆ ನಡೆಸಿದೆ ಎನ್ನಲಾಗಿದ್ದು ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡರೆ ಜೆಡಿಯುಗೆ ಬೆಂಬಲ ನೀಡುವುದಾಗಿ ಹೇಳಿದೆ ಎಂದು ಮೂಲಗಳು ತಿಳಿಸಿವೆ. ಜೆಡಿಯು ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಳ್ಳುವುದು ಬಹುತೇಕ ಪಕ್ಕಾ ಆಗಿದ್ದು ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ ಎನ್ನಲಾಗಿದೆ.
- ಈ ನಡುವೆ “ಪಟ್ಟಾಭಿಷೇಕಕ್ಕೆ ಸಿದ್ಧರಾಗಿ, ಲ್ಯಾಂಟರ್ನ್ ಹೊಂದಿರುವವರು ಹಿಂತಿರುಗಲು ಸಿದ್ಧರಾಗಿದ್ದಾರೆ” ಎಂದು ಲಾಲು ಯಾದವ್ ಅವರ ಪುತ್ರಿ ರೋಹಿಣಿ ಯಾದವ್ ಟ್ವೀಟ್ ಮಾಡಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.
- ಬಿಹಾರದ ಮಹಾಘಟಬಂಧನ್ (ಮಹಾಮೈತ್ರಿಕೂಟ)ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಎಂದು ತಮ್ಮ ಪಕ್ಷ ಘೋಷಿಸಿದೆ ಎಂದು ಕಾಂಗ್ರೆಸ್ ಶಾಸಕ ಶಕೀಲ್ ಅಹ್ಮದ್ ಖಾನ್ ಹೇಳಿದ್ದಾರೆ.
- ಏತನ್ಮಧ್ಯೆ, ಇಂದು ಮುಂಜಾನೆ ಬಿಹಾರ ಬಿಜೆಪಿ ನಾಯಕರು ಉಪ ಮುಖ್ಯಮಂತ್ರಿ ತಾರ್ಕಿಶೋರ್ ಪ್ರಸಾದ್ ಅವರ ನಿವಾಸದಲ್ಲಿ ಸಭೆ ನಡೆಸಿದ್ದು ಬಿಹಾರ ರಾಜ್ಯಪಾಲ ಫಾಗು ಚೌಹಾಣ್ ಅವರನ್ನು ಭೇಟಿ ಮಾಡಲು ಬಿಜೆಪಿ ಸಮಯ ಕೇಳಿದೆ. ಮೂಲಗಳ ಪ್ರಕಾರ, ರಾಜ್ಯ ಸಂಪುಟದ ಎಲ್ಲ 16 ಸಚಿವರು ಇಂದು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ.
- ಬಿಹಾರ ವಿಧಾನ ಸಭೆಯ ಸಂಖ್ಯಾಬಲ ಹೀಗಿದೆ: ಬಿಹಾರ 243 ಸದಸ್ಯ ಬಲದ ವಿಧಾನಸಭೆಯನ್ನು ಹೊಂದಿದೆ. ಒಟ್ಟು ಶಾಸಕರ ಪೈಕಿ ಬಿಜೆಪಿ 77 ಶಾಸಕರನ್ನು ಹೊಂದಿದ್ದರೆ, ಜೆಡಿಯು 45 ಸದಸ್ಯರನ್ನು ಹೊಂದಿದೆ. ಆರ್ಜೆಡಿ 127 ಶಾಸಕರನ್ನು ಹೊಂದಿರುವ ಏಕೈಕ ದೊಡ್ಡ ಪಕ್ಷವಾಗಿದೆ.