ಹೊಸದಿಗಂತ ವಿಜಯಪುರ:
ರಾಜ್ಯದಲ್ಲಿ ಎಲ್ಲ ಪಕ್ಷಗಳು ಹಾಗೂ ರಾಜಕಾರಣ ಗಬ್ಬೆದ್ದು ಹೋಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಟೀಕಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ರಾಜಕೀಯ ಪಕ್ಷದ ಕಾರ್ಯಕರ್ತ ಎಂದು ಹೇಳಿಕೊಳ್ಳಲು ಕಾರ್ಯಕರ್ತರು ನಾಚಿಕೆ ಪಡುವ ಹಾಗೆ ಆಗಿದೆ ಎಂದರು.
ಅಲ್ಲದೆ ಅನೇಕ ಹಿರಿಯರು ಕಟ್ಟಿದ ಬಿಜೆಪಿ ಪಕ್ಷದ ಪರಿಸ್ಥಿತಿ ಹೇಳತೀರದಾಗಿದೆ. ಈಗ ಬಿಜೆಪಿ ಪಕ್ಷಕ್ಕೆ ಸಿದ್ದಾಂತವೇ ಇಲ್ಲದಂತಾಗಿದೆ. ಸಾಮೂಹಿಕ ನೇತೃತ್ವ ಪಕ್ಷದಲ್ಲಿ ಉಳಿದಿಲ್ಲ, ಒಂದು ಕುಟುಂಬದ ಕೈ ಯಲ್ಲಿ ಪಕ್ಷ ಸಿಕ್ಕಿದೆ ಎಂದು ದೂರಿದರು.
ನಮ್ಮ ಭಿಕ್ಷೆಯಲ್ಲಿ ಚುನಾವಣೆ ಗೆದ್ದಿದ್ದೀಯಾ ಎಂದು ಡಿ.ಕೆ. ಶಿವಕುಮಾರ ವಿಜಯೇಂದ್ರಗೆ ಹೇಳುತ್ತಾರೆ. ಇನ್ನು ಕಾಂಗ್ರೆಸ್ ನಲ್ಲಿ ಐದು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಅನ್ನುತ್ತಾರೆ, ಇನ್ನೊಂದೆಡೆ ಸಮಾಜದವರು ಸಭೆ ಮಾಡುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು ಅಂತಾರೆ. ಆದರೆ ಅವರ ಮಾತಿಗೆ ಎಲ್ಲೂ ಬೆಲೆ ಇಲ್ಲ ಎಂದರು.
ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರು ಕುಂಭಮೇಳವನ್ನು ಟೀಕೆ ಮಾಡಿದರು. ಕುಂಬಮೇಳಕ್ಕೆ ಹೋಗಿ ಸ್ನಾನ ಮಾಡಿದರೆ ಬಡವರ ಹೊಟ್ಟೆ ತುಂಬತ್ತಾ ಅನ್ನುತ್ತಾರೆ. ನಿಮ್ಮಂತವರಿಗೆ ಟೀಕೆ ಮಾಡಲು ನನ್ಮ ಮನಸ್ಸು ಬರುತ್ತಿಲ್ಲ. ಡಿ.ಕೆ. ಶಿವಕುಮಾರ್ ಕುಟುಂಬ ಸಮೇತವಾಗಿ ಹೋಗಿ ಬರುವದಾಗಿ ಹೇಳುತ್ತಾರೆ. ಯು.ಟಿ. ಖಾದರ್ ಅವರು ಹೋಗಿ ಬಂದಿದ್ದಾರೆ. ಹಾಗಿದ್ದರೆ ಯು.ಟಿ. ಖಾದರ್ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ನಿಮ್ಮ ಪಕ್ಷದಿಂದ ಕಿತ್ತಾಕಿ ಎಂದು ಕಿಡಿ ಕಾರಿದರು.
ಹಸುಗಳ ಬಾಲ, ಕೆಚ್ಚಲು ಕಟ್ ಮಾಡುವವರಿಗೆ ಹಿಂದೂ ಸಮಾಜವೇ ಮುಂದಿನ ದಿನದಲ್ಲಿ ಅಂತವರ ಕೈ ಕಾಲು ಕಟ್ ಮಾಡುವ ಸಮಯ ಬರುತ್ತೆ ಎಂದರು.
ಖರ್ಗೆ ಅವರು ಹಿಂದೂ ಸಮಾಜದ ಬಗ್ಗೆ ಮಾತನಾಡುವುದನ್ನು ಬಿಟ್ಟು ಬಾಯಿ ಮುಚ್ಚಿಕೊಂಡ ಇರಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಚುನಾವಣೆ ಆಗುತ್ತೆ ಎಂದಾಗ ನಾನು ಸ್ಪರ್ದೆ ಮಾಡುತ್ತೇನೆ ಎಂದು ಕಾರ್ಯಕರ್ತರು ಹೇಳುವುದು ತಪ್ಪಲ್ಲ ಎಂದರು.
ಬಿಜೆಪಿಯಲ್ಲಿ ಗಬ್ಬೆದ್ದು ಹೋಗಿದೆ, ಬರೀ ಬಿಜೆಪಿ ಮಾತ್ರವಲ್ಲ ಎಲ್ಲ ಪಕ್ಷದಲ್ಲಿ ಗಬ್ಬೆದ್ದು ಹೋಗಿದೆ. ಹಿರಿಯರು ಕುಳಿತು ಇಂತಹ ಸಮಸ್ಯೆಗಳನ್ನು ಬಗೆ ಹರಿಸಬೇಕು ಎಂದರು. ಫೆ. 4 ರಂದು ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಅಸ್ತಿತ್ವಕ್ಕೆ ಬರಲಿದೆ. 1008 ಜನ ಸಾಧು, ಸಂತರ ಪಾದ ಪೂಜೆಯ ಮೂಲಕ ಬ್ರಿಗೇಡ್ ಆರಂಭಿಸಲಾಗುವುದು ಎಂದರು.
ಅದೃಷ್ಟ ಕಾಡ ಸಿದ್ಧೇಶ್ವರ ಸ್ವಾಮಿಜಿ, ಕನಕಗುರು ಪೀಠದ ಸ್ವಾಮಿಜಿಗಳ ನೇತೃತ್ವದಲ್ಲಿ ಬ್ರಿಗೇಡ್ ಉದ್ಘಾಟನೆ ಆಗಲಿದೆ 25 ರಿಂದ 30 ಸಾವಿರ ಜನ ಸೇರುವ ನಿರೀಕ್ಷೆ ಹೊಂದಿದ್ದೆವು. ಆದರೆ 1 ಲಕ್ಷ ಜನ ಸೇರುವ ಭಾವನೆ ಕಾಣುತ್ತಿದೆ ಎಂದರು.
ಎಲ್ಲ ಸ್ವಾಮೀಜಿಗಳಿಗೆ ತಾಯಂದಿರು ಪೂರ್ಣ ಕುಂಭದಿಂದ ಸ್ವಾಗತ ಮಾಡುವರು. ವೈಭವದಿಂದ ಈ ಕಾರ್ಯಕ್ರಮ ಆರಂಭ ಆಗುವುದು ಎಂದರು.
ಅನೇಕ ಮಠಗಳು ಆರ್ಥಿಕ ದುಸ್ಥಿತಿಯಲ್ಲಿವೆ, ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಾರೆ. ಮಠಗಳ ಅಭಿವೃದ್ಧಿ ಆಗಬೇಕು ಎಂಬುದು ನಮ್ಮ ಆಪೇಕ್ಷೆ ಇದೆ. ದೇವಸ್ಥಾನದ ಪೂಜೆ ಮಾಡುವ ಕೆಲ ಅರ್ಚಕರಿಗೆ ಪೂಜೆಯ ವಿಧಾನ ಕೂಡಾ ಗೊತ್ತಿಲ್ಲ. ಅರ್ಚಕರಿಗೆ ಸರಿಯಾದ ತರಬೇತಿ ಕೊಡಬೇಕು ಎಂಬ ಉದ್ದೇಶ ಕೂಡಾ ಬ್ರಿಗೇಡ್ ಹೊಂದಿದೆ ಎಂದರು.
ರೈತರಿಗೆ, ಗೋ ಮಾತೆಗೆ ಅನ್ಯಾಯವಾಗುತ್ತಿದೆ. ಹಸುವಿನ ಬಾಲ ಕತ್ತರಿಸುವುದು, ನಮ್ಮ ಶ್ರದ್ದಾ ಕೇಂದ್ರಗಳಿಗೆ ಅನ್ಯಾಯವಾಗುತ್ತಿದೆ. ಈ ಎಲ್ಲ ಅಂಶಯಗಳಿಗೆ ಗೌರವ ಸಿಗಬೇಕು ಎಂಬ ಕಾರಣಕ್ಕೆ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಆಗಲಿದೆ ಎಂದರು.
ಕಾರ್ಯಕ್ರಮಕ್ಕೆ ನಾವು ಯಾವುದೇ ರಾಜಕೀಯ ಮುಖಂಡರಿಗೆ ಕರೆದಿಲ್ಲ, ಯಾರೇ ಬಂದರೂ ಸ್ವಾಗತ ಮಾಡಲಾಗುವುದು. ಬ್ರಿಗೇಡ್ ಗೂ ರಾಜಕೀಯಕ್ಕೂ ಸಂಬಂಧ ಇಲ್ಲ. ರಾಷ್ಟ್ರ, ರಾಜ್ಯ, ಹಿಂದುತ್ವದ, ಮಠಾಧೀಶರ ರಕ್ಷಣೆಗಾಗಿ ಬ್ರಿಗೇಡ್ ಆರಂಭಿಸಲಾಗುವದು ಎಂದರು.