ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ವಿಧಾನಸಭೆ ಚುನಾವಣೆಗೆ ಇಂದು ಎರಡನೇ ಹಂತದ ಮತದಾನ ನಡೆಯಲಿದೆ. 14 ಜಿಲ್ಲೆಗಳ 93 ವಿಧಾನಸಭಾ ಸ್ಥಾನಗಳಿಗೆ ಸೋಮವಾರ ಚುನಾವಣೆ ನಡೆಯಲಿದ್ದು, ಈ ಬಾರಿ 2.5 ಕೋಟಿ ಜನರು ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ. ಎರಡನೇ ಹಂತದಲ್ಲಿ ಒಟ್ಟು 833 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಇವರಲ್ಲಿ 764 ಪುರುಷ ಅಭ್ಯರ್ಥಿಗಳು ಮತ್ತು 69 ಮಹಿಳಾ ಅಭ್ಯರ್ಥಿಗಳು. 285 ಸ್ವತಂತ್ರ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಈ ಚುನಾವಣೆಯು ಮುಖ್ಯವಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ತ್ರಿಕೋನ ಸ್ಪರ್ಧೆಯಾಗಿದೆ. ಎರಡನೇ ಹಂತದಲ್ಲಿ ಅಹಮದಾಬಾದ್, ವಡೋದರಾ ಮತ್ತು ಗಾಂಧಿನಗರದಂತಹ ಕ್ಷೇತ್ರಗಳಿವೆ. ಇದೇ ತಿಂಗಳ 1ರಂದು ಮೊದಲ ಹಂತದ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಶೇ.63.31ರಷ್ಟು ಮತದಾನ ದಾಖಲಾಗಿದೆ. ಎರಡನೇ ಹಂತದ ಚುನಾವಣೆಗಾಗಿ ಚುನಾವಣಾ ಆಯೋಗ 26,409 ಮತಗಟ್ಟೆಗಳನ್ನು ಸ್ಥಾಪಿಸಿದೆ. 29,000 ಪ್ರಿಸೈಡಿಂಗ್ ಅಧಿಕಾರಿಗಳು ಮತ್ತು 84,000 ಮತಗಟ್ಟೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅಲ್ಲದೆ, ಅಧಿಕಾರಿಗಳು 36,000 ಇವಿಎಂಗಳನ್ನು ಸಿದ್ಧಪಡಿಸಿದ್ದಾರೆ. ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಇದೇ ತಿಂಗಳ 8ರಂದು ಫಲಿತಾಂಶ ಹೊರಬೀಳಲಿದೆ.