ಹೊಸದಿಗಂತ ವರದಿ ಹುಬ್ಬಳ್ಳಿ:
ಇಲ್ಲಿಯ ವಿದ್ಯಾನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜ್ ಅವ್ಯವಸ್ಥೆ ಆಗರವಾಗಿರುವುದನ್ನು ಖಂಡಿಸಿ ಹಾಗೂ ಎಂಜಿನಿಯರ್, ಎಂಬಿಎ ಹಾಗೂ ಎಂಕಾಂ ವಿದ್ಯಾರ್ಥಿಗಳ ಡಿಸಿಇಟಿ ಹಾಗೂ ಪಿಜಿಸಿಇಟಿ ೩ ನೇ ಸುತ್ತಿನ ಕೌನ್ಸ್‌ಲಿಂಗ್ ನಡೆಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ ಕಾರ್ಯಕರ್ತರು ಹಾಗೂ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಬುಧವಾರ ಇಲ್ಲಿಯ ವಿದ್ಯಾನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಕಾಲೇಜು ದುರಸ್ತಿ ಅನುದಾನ ಬಿಡುಗಡೆ ಮಾಡದ ಸರ್ಕಾರಕ್ಕೆ ಕ್ಕಾರ ಕ್ಕಾರ, ಡಿಸಿಇಟಿ, ಪಿಜಿಸಿಇಟಿ ಪ್ರವೇಶಾತಿ ಎರಡೆ ಸುತ್ತು ಕೌನ್ಸ್‌ಲಿಂಗ್ ನಡೆಸಿರುವು ಖಂಡನೀಯ, ಬೇಕೆ ಬೇಕು ನ್ಯಾಯ ಬೇಕು ಎಂಬ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾಲೇಜಿನ ಅನೇಕ ವಿದ್ಯಾರ್ಥಿನಿಯರು ಮಾತನಾಡಿ, ಕಾಲೇಜಿನ್ ಕಟ್ಟಡ ಶಿಥಿಲಾವ್ಯವಸ್ಥೆಯಿಂದ ಕೂಡಿದ್ದು, ಕಾಲೇಜಿನಲ್ಲಿ ಭಯದ ವಾತಾವರಣದಲ್ಲಿ ಅಲೆದಾಡುವಂತಾಗಿದೆ. ಶೌಚಾಲಯ ವ್ಯವಸ್ಥೆ ಬಗ್ಗೆ ಹೇಳತಿರದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಲಿಯುತ್ತಿದ್ದೆ. ಕಾಲೇಜಿನಲ್ಲಿ ಕೊಠಡಿಗಳ ಅಭಾವವಿದೆ. ಮೂಲ ಸೌಕರ್ಯ ಸರಿಯಾಗಿಲ್ಲ. ಕಾಲೇಜಿನ ಆಡಳಿಯ ಮಂಡಳಿ ಈ ಬಗ್ಗೆ ಗಮನ ಹರಿಸಬೇಕು. ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿ ನಮ್ಮ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಎಬಿವಿಪಿಎ ಕರ್ನಾಟಕ ಉತ್ತರ ಪ್ರಾಂತ ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ ಮಾತನಾಡಿ, ಬಡ ವಿದ್ಯಾರ್ಥಿಗಳು ಎಂಜಿನಿಯರಿಂಗ್, ಎಂಬಿಎ ಹಾಗೂ ಎಂಕಾಂ ಪದವಿ ಪಡೆಯಬೇಕು ಎಂಬ ಆಸೆಗೆ ಕರ್ನಾಟಕ ಪರೀಕ್ಷಾ ಪ್ರಾಕಾರ ನಿರ್ಧಾರದಿಂದ ತಪ್ಪುವ ಸ್ಥಿತಿ ನಿರ್ಮಾಣವಾಗಿದೆ. ಡಿಸಿಇಟಿ ಹಾಗೂ ಪಿಜಿಸಿಇಟಿ ಪ್ರವೇಶಾತಿ 2 ನೇ ಸುತ್ತಿಗೆ ಮುಗಿಸಿದ್ದಾರೆ. ಇನ್ನೊಂದು ಸುತ್ತು ನಡೆಸದೆ ವಿದ್ಯಾರ್ಥಿಗಳಿಗೆ ವಂಚಿಸುವ ಕೆಲಸವಾಗಿದೆ ಎಂದರು.
ಈ ರೀತಿ ಮಾಡುವುದರಿಂದ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿರಾಗುತ್ತಾರೆ. ಶಿಕ್ಷಣ ಇಲಾಖೆ ಪ್ರವೇಶಕ್ಕೆ ಮೂರನೇ ಸುತ್ತು ನಡೆಸಬೇಕು. ಖಾಸಗಿ ಕಾಲೇಜಿನಲ್ಲಿ ಸರ್ಕಾರಿ ಕೂಟಾದಲ್ಲಿ ಸೀಟು ದೊರೆಯುತ್ತಿಲ್ಲ. ಜಾಸ್ತಿ ದುಡ್ಡಿಗೆ ಸೀಟು ಮಾರಿಕೊಳ್ಳುತ್ತಿದ್ದಾರೆ. ಇದರಿಂದ ಬಡವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಸರ್ಕಾರ ವಿದ್ಯಾರ್ಥಿ ವಿರೋಧ ನೀತಿ ಬಿಟ್ಟು ಅವರ ಸಮಸ್ಯೆ ಬೇಗ ಪರಿಹರಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಾಂತ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಸುಶೀಲ ಇಟಗಿ, ಮೌನೇಶ ಗೌಡ, ಪುಷ್ಪಾ, ಅನುರಾಧ ಉಪಾಸಿ, ಲಕ್ಷ್ಮೀ ನಾಯಕರ, ಅಮೃತ ಅರುಣಕೊಳ್ಳಿ, ಜ್ಯೋತಿ ಪಾಲನಕರ ಇದ್ದರು.