ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜ್ಞಾನ ರಾಕೆಟ್ ನಂತೆ ಮುನ್ನಡೆಯುತ್ತಿದ್ದರೂ ಜನರಲ್ಲಿ ಮೂಢನಂಬಿಕೆಗಳು ಕಡಿಮೆಯಾಗಿಲ್ಲ..ವಿಚಿತ್ರ ಪದ್ಧತಿಗಳು ಬದಲಾಗುತ್ತಿಲ್ಲ. ಇತ್ತೀಚೆಗೆ ನಡೆದ ಘಟನೆಯೊಂದು ಹಾಗೆಯೇ ಅನಿಸುತ್ತಿದೆ. ಮೆಣಸಿನಕಾಯಿ ಖಾರದ ನೀರಿನಿಂದ ಎಲ್ಲಾದರೂ ಸ್ನಾನ ಮಾಡೋದನ್ನು ಕಂಡಿದ್ದೀರಾ? ಕೇಳಿದ್ದೀರಾ? ಈ ಘಟನೆ ಊಹೆಗೂ ನಿಲುಕದ್ದು. ಮೆಣಸಿನಕಾಯಿಯ ನೀರು ಕಣ್ಣು, ಬಾಯಿ ಮಾತ್ರ ಅಲ್ಲ, ಇಡೀ ದೇಹವನ್ನು ಉರಿಯುವಂತೆ ಮಾಡುತ್ತದೆ. ಇದೆಲ್ಲವನ್ನೂ ಲೆಕ್ಕಿಸದೆ ತಮಿಳುನಾಡಿನ ಅರ್ಚಕರೊಬ್ಬರು ಈ ಸಾಹಸ ಮಾಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ಧರ್ಮಪುರಿ ಜಿಲ್ಲೆ ಧರನಹಳ್ಳಿ ಗ್ರಾಮದ ಗೋವಿಂದಂ ಎಂಬ ಪೂಜಾರಿ ಈಗ ಸುದ್ದಿಯಲ್ಲಿದ್ದಾರೆ. ಪ್ರತಿ ವರ್ಷ ಆದಿ ಅಮಾವಾಸ್ಯೆಯಂದು ಗ್ರಾಮ ದೇವರು ಪೆರಿಯ ಕರುಪ್ಪಸಾಮಿಗೆ ಮೆಣಸಿನಕಾಯಿ ಮತ್ತು ಹಾಲಿನ ಅಭಿಷೇಕ ಮಾಡಲಾಗುತ್ತದೆ. ಈ ಕ್ರಮದಲ್ಲಿ ಭಕ್ತರು ಖಾರದ ನೀರಿನಿಂದ ಅರ್ಚಕನಿಗೆ ಸ್ನಾನ ಮಾಡಿಸುತ್ತಾರೆ. ಹೀಗೆ ಮಾಡಿದರೆ ದುಷ್ಟಶಕ್ತಿಗಳು ದೂರವಾಗಿ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ.
ಪೂಜಾರಿ ಮೇಲೆ 108 ಕೆಜಿ ಮೆಣಸಿನ ಕಾಯಿ ಖಾರ ಬೆರೆಸಿರುವ ನೀರು ಎರಚಿದ್ದಾರೆ. ಕಣ್ಣಲ್ಲಿ, ಬಾಯಲ್ಲಿ ನೀರು ಹರಿದರೂ, ಅರ್ಚಕ ಮಾತ್ರ ಅಲ್ಲಾಡದಂತೆ ಕುಳಿತಿದ್ದಾರೆ. ಈ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆಯಂತೆ. ಎಷ್ಟೇ ಖಾರದ ನೀರು ಹಾಕಿದರೂ ಈತನಿಗೆ ಏನೂ ಆಗುವುದಿಲ್ಲವಂತೆ. ಈ ದೇವಾಲಯದ ಇನ್ನೊಂದು ವಿಶೇಷವೆಂದರೆ.. ಪೆರಿಯ ಕುರುಪ್ಪಸ್ವಾಮಿಗೆ ಭಕ್ತರು ಮದ್ಯ, ಸಿಗರೇಟುಗಳನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ.
ದೇವರ ಹೆಸರಲ್ಲಿ ಜನ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿರುವುದಂತೂ ಸತ್ಯ.