Monday, December 11, 2023

Latest Posts

ಪಠ್ಯ ಪುಸ್ತಕ ಗೊಂದಲದ ಕುರಿತು ಮಠಾಧೀಶರ ನಿಲುವನ್ನು ಗಂಭೀರವಾಗಿ ಪರಿಗಣಿಸಿ ನಿವಾರಿಸಬೇಕು: ಜಗದೀಶ ಶೆಟ್ಟರ್

ಹೊಸದಿಗಂತ ವರದಿ,ಹುಬ್ಬಳ್ಳಿ:

ಪಠ್ಯ ಪುಸ್ತಕ ಪರಿಷ್ಕರಣೆಯ ಗೊಂದಲದ ಕುರಿತು ಮಠಾಧೀಶರಲ್ಲಿರುವ ನಿಲುವನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗನೆ ನಿವಾರಿಸಬೇಕು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲಹೆ ನೀಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಅವರು ವರದಿ ತಕ್ಷಣ ತರಿಸಿಕೊಂಡು ಎಲ್ಲಿ ತಪ್ಪಾಗಿದೆ ಅದನ್ನು ಸರಿ ಪಡಿಸುವ ಕಾರ್ಯ ಮಾಡಬೇಕು. ತಪ್ಪು ಆಗಿಲ್ಲವಾದಲ್ಲಿ ಮಠಾಧೀಶರ ಮನವಲಿಸಬೇಕು ಎಂದರು.

ಮಠಾಧೀಶರು ಈ ವಿಚಾರವಾಗಿ ಪತ್ರ ಬರೆದಿದ್ದಾರೆ ಎಂದರೆ ಸರ್ಕಾರ ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇದೆ. ಪಠ್ಯ ಪುಸ್ತಕ ಸರಿ ಇದ್ದರೆ ಬದಲಿಸುವ ಪ್ರಶ್ನೆ ಇಲ್ಲ. ನಾನು ಸಹ ವೈಯಕ್ತಿಕವಾಗಿ ಪಠ್ಯ ಪುಸ್ತಕಗಳ ಅಧ್ಯಯನ ಮಾಡಿ ಅದರಲ್ಲಿ ತಪ್ಪುಗಳಿದ್ದರೆ ಸರ್ಕಾರದ ಗಮನಕ್ಕೆ ತಂದು ತಿದ್ದುಪಡಿ ಮಾಡಲು ಸಲಹೆ ನೀಡುತ್ತೇನೆ ಎಂದು ತಿಳಿಸಿದರು.
ಪರಿಷ್ಕರಣೆಯಾದ ಪಠ್ಯಪುಸ್ತಕಗಳನ್ನು ನೋಡದೆ ವಿರೋಧ ಪಕ್ಷ ಮತ್ತು ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಸಿಎಂ ಅವರು ಎಲ್ಲವನ್ನು ಅರಿತುಕೊಂಡು ಸಮಸ್ಯೆ ಬೇಗ ಬಗೆಹರಿಸಿಕೊಳ್ಳಬೇಕು ಎಂದರು.

ರಾಜ್ಯ ಸಭೆ ಚುನಾವಣೆಗೆ ಕಾಂಗ್ರೆಸ್ ನಾಲ್ಕನೇ ಅಭ್ಯರ್ಥಿಯನ್ನು ಹಾಕುವ ಮೂಲಕ ಗೊಂದಲ ಸೃಷ್ಟಿಸಿದೆ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದರಿಂದ ಹಲವಾರು ರಾಜ್ಯದಲ್ಲಿ ನಮ್ಮವರೆ ಸಿಎಂ ಆಗಿದ್ದಾರೆ ಮತ್ತು ಮತದಾರರು ಹೆಚ್ಚಾಗಿದ್ದಾರೆ. ಬಿಜೆಪಿ ಮೂರು ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡುತ್ತೇವೆ ಎಂದರು.

ಸೋನಿಯಾ ಗಾಂಧಿಯವರು ಎಚ್‌ಡಿ ರೇವಣ್ಣ ಅವರಿಗೆ ಮಾತು ಕೊಟ್ಟಿದ್ದರು. ಆದರೆ ತಮ್ಮ ಪಕ್ಷದಿಂದ ನಾಲ್ಕನೇ ಅಭ್ಯರ್ಥಿ ಹಾಕಿ ಕೈಕೊಟ್ಟಿದ್ದಾರೆ. ಕಾಂಗ್ರೆಸ್ ನಂಬುವಂತಹ ಪಕ್ಷವಲ್ಲ. ಹಿಂದೇ ಪ್ರಧಾನಿಯಾಗಿದ್ದ ದೇವೆಗೌಡರಿಗೂ ಪ್ರಧಾನಿ ಮಾಡಿ ಕೈಕೊಟ್ಟಿದ್ದರು. ಅದಕ್ಕೆ ರೇವಣ್ಣ ಅವರಿಗೆ ಸಲಹೆ ನೀಡುತ್ತೇನೆ ಕಾಂಗ್ರೆಸ್ ನಂಬಬೇಡಿ ಎಂದರು.
ಆರ್‌ಎಸ್‌ಎಸ್ ಬಗ್ಗೆ ಅವಹೇಳನಕಾರಿ ಪದ ಬಳಕೆ ಸರಿಯಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಅವರ ಪಕ್ಷದ ನಾಯಕ ಎಂ.ಡಿ. ಲಕ್ಷ್ಮೀ ನಾರಾಯನ ಹೇಳಿದ್ದು, ಆ ಮಾತು ಹಿಂಪಡೆಯಬೇಕು ಎಂದು ವಿನಂತಿಸಿದ್ದಾರೆ. ಬಿಜೆಪಿ ಅವರು ಹೇಳಿಕೆ ನೀಡಿದರೆ ಟೀಕೆ ಎನ್ನುವ ಸಿದ್ದರಾಮಯ್ಯ ಅವರಿಗೆ ಅವರ ಪಕ್ಷದವರು ಹೇಳಿದ್ದಾರೆ. ಆರ್‌ಎಸ್‌ಎಸ್ ಬಗ್ಗೆ ಈ ರೀತಿ ಮಾತನಾಡಿದ್ದು ಹಿಂದೂಗಳ ಮನಸ್ಸು ಒಡೆದಿದ್ದು, ಇದರಿಂದ ಕಾಂಗ್ರೆಸ್ ಪಕ್ಷದ ಗೌರವೂ ಸಹ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ ಎಂದು ಜಗದೀಶ ಶೆಟ್ಟರ ತಿಳಿಸಿದರು.

ಇಡಿ ಮತ್ತು ಐಟಿ ವಿಭಾಗಗಳು ಪಕ್ಷಕ್ಕೆ ಸೀಮಿತವಾಗಿದ್ದಲ್ಲ. ಅವರು ಎಲ್ಲ ಮಾಹಿತಿ ಸಂಗ್ರಹ ಮಾಡಿ ದಾಳಿ ನಡೆಸುತ್ತಾರೆ. ಕಾಂಗ್ರೆಸ್ ಪ್ರಮುಖ ಮನೆಯ ಮೇಲೆ ದಾಳಿ ಮಾಡಿರುವುದಕ್ಕೆ ರಾಜಕೀಯ ಬಣ್ಣ ಹಚ್ಚುವುದು ಬೇಡ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!