ಪ್ರಾಮಾಣಿಕ ಸರ್ಕಾರಗಳು ಒಟ್ಟಾಗಿ ಸೇರಿದಾಗ ಬಡತನ ನಿರ್ಮೂಲನೆಯಾಗಲಿದೆ: ಪ್ರಧಾನಿ ಮೋದಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೆಲವು ರಾಜಕೀಯ ಪಕ್ಷಗಳು ಬಡತನ ನಿರ್ಮೂಲನೆ ಮಾಡುವುದಾಗಿ ತುಂಬಾ ಘೋಷಣೆಗಳನ್ನು ಕೂಗಿದ್ದವು. ಆದರೆ ಬಡವರ ಸಬಲೀಕರಣ ಸಾಧ್ಯವಾಗಲಿಲ್ಲ. ಆದರೆ ಬಡವರು ಸಬಲೀಕರಣಗೊಂಡಾಗಲೇ ಬಡತನದ ವಿರುದ್ಧ ಹೋರಾಡುವ ಧೈರ್ಯ ಬರಲಿದೆ ಎಂದು ನಾನು ಭಾವಿಸುತ್ತೇನೆ. ಪ್ರಾಮಾಣಿಕ ಸರ್ಕಾರಗಳು ಒಟ್ಟಾಗಿ ಸೇರಿ ಬಡವರ ಸಬಲೀಕರಣ ಮಾಡಿದಾಗ, ಬಡತನ ನಿರ್ಮೂಲನೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿ ಆವಾಸ್​​ ಯೋಜನೆಯಡಿ(ಪಿಎಂಎವೈ) ಮಧ್ಯಪ್ರದೇಶದಲ್ಲಿ ಗ್ರಾಮೀಣ ಫಲಾನುಭವಿಗಳಿಗೆ ನಿರ್ಮಾಣಗೊಂಡಿರುವ 5.21 ಲಕ್ಷ ಮನೆ ಹಸ್ತಾಂತರ ಮಾಡಿದ ಬಳಿಕ ಅವರು ಮಾತನಾಡಿದರು.
ತಮ್ಮ ಸರ್ಕಾರ ಬಡವರಿಗೋಸ್ಕರ ಮನೆ ಒದಗಿಸಲು ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು. ಗ್ರಾಮೀಣ ಪ್ರದೇಶದಲ್ಲಿ 2 ಕೋಟಿ ಸೇರಿದಂತೆ ಇಲ್ಲಿಯವರೆಗೆ ಪಿಎಂಎವೈ ಯೋಜನೆಯಡಿ 2.5 ಕೋಟಿ ಮನೆ ನಿರ್ಮಿಸಲಾಗಿದ್ದು, ದೇಶದಲ್ಲಿರುವ ಎಲ್ಲ ಬಡವರಿಗೂ ಸೂರು ಒದಗಿಸಿಕೊಡುವ ಉದ್ದೇಶದಿಂದ ಕೆಲಸ ಮಾಡಲಾಗುತ್ತಿದೆ ಎಂದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿರಲಿ ಅಥವಾ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರಲಿ ಪಕ್ಷವು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಮಂತ್ರದೊಂದಿಗೆ ಮುನ್ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಬಡವರಿಗೋಸ್ಕರ ಮೀಸಲಾದ ಕೋಟ್ಯಂತರ ರೂಪಾಯಿ ಮೌಲ್ಯದ ಆಹಾರ ಧಾನ್ಯ ಕಳ್ಳತನ ತಡೆಗಟ್ಟಲು ದೇಶದಲ್ಲಿ 2014ರಿಂದ ಇಲ್ಲಿಯವರೆಗೆ ನಾಲ್ಕು ಕೋಟಿಗೂ ಹೆಚ್ಚಿನ ನಕಲಿ ಪಡಿತರ ಚೀಟಿ ರದ್ದುಗೊಳಿಸಲಾಗಿದೆ. ಸಾಲಿನಲ್ಲಿ ನಿಲ್ಲುವ ಪ್ರತಿ ವ್ಯಕ್ತಿಗೆ ಸರ್ಕಾರದ ಯೋಜನೆಯ ಲಾಭ ಸಿಗುವಂತೆ ಮಾಡುವುದೇ ನಮ್ಮ ಉದ್ದೇಶ ಎಂದು ಪ್ರಧಾನಿ ಮೋದಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!