ದೇಶದಲ್ಲಿ ಕಲ್ಲಿದ್ದಲಿನ ತೀವ್ರ ಕೊರತೆಯಿಂದ ವಿದ್ಯುತ್‌ ಬಿಕ್ಕಟ್ಟು;‌ ಸ್ಥಾವರಗಳಲ್ಲಿ ಕನಿಷ್ಟ ಮಟ್ಟಕ್ಕಿಳಿದ ಕಲ್ಲಿದ್ದಲು ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದೇಶಾದ್ಯಂತ ಉಷ್ಣ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲು ಕೊರತೆಯನ್ನು ಎದುರಿಸುತ್ತಿವೆ. ಇದರಿಂದಾಗಿ ದೇಶದಲ್ಲಿ ದೊಡ್ಡಮಟ್ಟದ ವಿದ್ಯುತ್ ಬಿಕ್ಕಟ್ಟು ಎದುರಾಗುವ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ.
ಕೋವಿಡ್-19 ಸಾಂಕ್ರಾಮಿಕದ ನಂತರ ಚೇತರಿಕೆ ಕಂಡ ಕೈಗಾರಿಕಾ ಕ್ಷೇತ್ರ, ಬಿರು ಬೇಸಿಗೆ ಹಾಗೂ ಕಲ್ಲಿದ್ದಲು ಪೂರೈಕೆಯ ಕೊರತೆಯಿಂದಾಗಿ ಭಾರತವು ವಿದ್ಯುತ್ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ವಿದ್ಯುತ್ ಕಡಿತಕ್ಕೆ ಕಾರಣವಾಗಿದೆ. ಪಂಜಾಬ್‌, ಉತ್ತರ ಪ್ರದೇಶ, ಆಂಧ್ರ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ದಿನಕ್ಕೆ 8 ಗಂಟೆಗಳಿಗಿಂತಲೂ ಹೆಚ್ಚು ಕಾಲ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ.
ದೇಶದ 173 ಕಲ್ಲಿದ್ದಲು ವಿದ್ಯುತ್ ಸ್ಥಾವರಗಳ ಪೈಕಿ 106 ಸ್ಥಾವರಗಳಲ್ಲಿ ಶೇ.25 ಕ್ಕಿಂತಲೂ ಕಡಿಮೆ ಪ್ರಮಾಣದ ಕಲ್ಲಿದ್ದಲು ಸಂಗ್ರಹವಿದೆ. 2,02,678 ಮೆಗಾವ್ಯಾಟ್ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯವಿರುವ ಈ ಸ್ಥಾವರಗಳು ದೇಶದ 65% ವಿದ್ಯುತ್ ಬೇಡಿಕೆಯನ್ನು ಪೂರೈಸುತ್ತವೆ. ಈ ಸ್ಥಾವರಗಳಲ್ಲಿ 9 ದಿನಗಳಿಗೆ ಆಗುವಷ್ಟು ಮಾತ್ರವೇ ಹೆಚ್ಚುವರಿ ಇಂಧನ ಸಂಗ್ರಹವಿದೆ ಎಂದು ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ (CEA) ಅಂಕಿಅಂಶಗಳು ಹೇಳುತ್ತವೆ.
ಏಪ್ರಿಲ್‌ ತಿಂಗಳಿನ 9 ದಿನಗಳಲ್ಲಿ ಕಲ್ಲಿದ್ದಲು ದಾಸ್ತಾನು ನಿರ್ಣಾಯಕ ಮಟ್ಟದಲ್ಲಿತ್ತು. ಕಲ್ಲಿದ್ದಲು ಪೂರೈಕೆ ಇನ್ನೂ ಸುಧಾರಿಸಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಪರಿಸ್ಥಿತಿ ಗಂಭೀರವಾಗಬಹುದು ಎಂದು ನೊಮುರಾ ವರದಿ ಎಚ್ಚರಿಸಿದೆ. ‘ಭಾರತದಲ್ಲಿ ವಿದ್ಯುತ್‌ ಬಿಕ್ಕಟ್ಟು ಸೃಷ್ಟಿ ಸನ್ನಿಹಿತ’ ಎಂಬ ಶೀರ್ಷಿಕೆಯ ವರದಿಯಲ್ಲಿ ನೊಮುರಾ ಈ ಸಂಗತಿಯನ್ನು ವಿವರಿಸಿದೆ. ವಿದ್ಯುತ್‌ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಲ್ಲಿದ್ದಲು ದಾಸ್ತಾನು ಕರಗುತ್ತಿದೆ. ಅದಕ್ಕೆ ತಕ್ಕಂತೆ ಪೂರೈಕೆ ಆಗುತ್ತಿಲ್ಲಎಂದಿದೆ.
ಹೀಗಿದ್ದರೂ ಕೋಲ್‌(ಕಲ್ಲಿದ್ದಲು) ಇಂಡಿಯಾ ಲಿಮಿಟೆಡ್‌ನ ಅಧಿಕಾರಿಗಳು ಕಲ್ಲಿದ್ದಲು ಪೂರೈಕೆಯಲ್ಲಿನ ಕೊರತೆಯನ್ನು ನಿರಾಕರಿಸಿದ್ದಾರೆ. ಕಂಪನಿಯು 2022ರ ಏಪ್ರಿಲ್‌ ಮೊದಲಾರ್ಧದಲ್ಲಿ ಕಲ್ಲಿದ್ದಲು ಪೂರೈಕೆಯನ್ನು ಶೇ. 14.2ರಷ್ಟು ಹೆಚ್ಚಿಸಿದೆ. ದಿನಕ್ಕೆ ಸರಾಸರಿ 16.4 ಲಕ್ಷ ಟನ್‌ ಕಲ್ಲಿದ್ದಲನ್ನು ಪೂರೈಸಲಾಗಿದೆ ಎಂದು ತಿಳಿಸಿದ್ದಾರೆ. ಕೋಲ್‌ ಇಂಡಿಯಾದ ಬಳಿ ದೇಶಕ್ಕೆ ಕನಿಷ್ಠ 1 ತಿಂಗಳಿಗೆ ಸಾಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!