ಡಿಕೆಶಿಗೆ ಅಧಿಕಾರ ಬಿಟ್ಟುಕೊಟ್ಟಿಲ್ಲ, ಹಾಗಂತ ರಾಮನಗರ ಪ್ರತ್ಯೇಕ ರಾಜ್ಯ ಮಾಡ್ತೀರಾ? : ಸಚಿವ ಸುನೀಲ್‍ಕುಮಾರ್

ಹೊಸದಿಗಂತ ವರದಿ ಬೆಂಗಳೂರು:

ದೇಶ ವಿಭಜನೆ ಹೇಳಿಕೆ ನೀಡಿದ ಸಂಸದ ಡಿ.ಕೆ ಸುರೇಶ್ ಅವರಿಗೆ ಬುದ್ಧಿವಾದ ಹೇಳುವ ಕೆಲಸ ಆಗಬೇಕು. ಹೊರತು ಅವರನ್ನು ಸಮರ್ಥಿಸುವುದಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸುನೀಲ್‍ಕುಮಾರ್ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಒಬ್ಬ ಜನಪ್ರತಿನಿಧಿಯಾಗಿದ್ದರೂ ಅನುದಾನ ಕಡಿಮೆ ಆಯ್ತು ಅಂತ ದೇಶ ವಿಭಜನೆ ಮಾತನಾಡಿದ್ದಾರೆ. ಅದನ್ನ ಸಮರ್ಥನೆ ಮಾಡಿಕೊಂಡದ್ದು ನಾಚಿಕೆಗೇಡಿನ ಸಂಗತಿ. ಸಮರ್ಪಕ ಮಾಹಿತಿ ಇಲ್ಲದೆ, ದಕ್ಷಿಣ ಭಾರತ ವಿಭಜನೆ ಆಗಬೇಕು ಅನ್ನೋ ಕಲ್ಪನೆಯೇ ಸರಿಯಲ್ಲ. ಇವರದು ಹತಾಶೆಯ ಹೇಳಿಕೆ. ಯಾವುದೇ ಕಾರಣಕ್ಕೂ ದೇಶ ವಿಭಜನೆ ಆಗಬಾರದು ಎಂದರಲ್ಲದೆ, ಇವರ ಹೇಳಿಕೆಗೆ ಜನಾಕ್ರೋಶ ಶುರುವಾಗಿದೆ. ಅದನ್ನು ಸಮರ್ಥನೆ ಮಾಡಿಕೊಳ್ಳಬಾರದು ಎಂದು ತಿಳಿಸಿದರು.

ಎರಡೂವರೆ ವರ್ಷಗಳಾದ ಬಳಿಕ ಸಿದ್ದರಾಮಯ್ಯ ಅವರು, ಡಿಕೆಶಿಗೆ ಅಧಿಕಾರ ಬಿಟ್ಟುಕೊಡಲಿಲ್ಲ ಅಂತ ರಾಮನಗರವನ್ನೇ ಪ್ರತ್ಯೇಕ ರಾಜ್ಯ ಮಾಡ್ತೀರಾ.? ಭಾರತ್ ಜೋಡೋ ಯಾವ ಉದ್ದೇಶವೋ, ದೇಶ ಜೋಡಿಸುವ ಉದ್ದೇಶ ಒಳ್ಳೆಯದೇ. ಕಾಂಗ್ರೆಸ್ ಹೈಕಮಾಂಡ್ ನಾಯಕರು ಭಾರತ್ ಜೋಡೋ ಮಾಡ್ತಿದ್ದಾರೆ. ಇವರು ಭಾರತ ವಿಭಜನೆ ಮಾಡುವ ಹೇಳಿಕೆ ನೀಡ್ತಿದ್ದಾರೆ ಎಂದು ಟೀಕಿಸಿದರು.

ಮಾಜಿ ಸಚಿವ, ಕಾಂಗ್ರೆಸ್ ನಾಯಕ ಹಾಸನದ ಶಿವರಾಮ್ ಕಾಂಗ್ರೆಸ್ ನಾಯಕರು 50% ಕೇಳಿದ್ದಾರೆ ಅಂತ ಹೇಳಿಕೆ ನೀಡಿದ್ದಾರೆ. ಎಲ್ಲಾ ಇಲಾಖೆಗಳಲ್ಲಿ 50% ಆರೋಪ ಕೇಳಿಬಂದಿದೆ. ಬಿ.ಆರ್.ಪಾಟೀಲ್ ಅವರಿಂದ ಹಿಡಿದು, ಶಿವರಾಮ್ ವರೆಗೂ ಅನೇಕರು ಆರೋಪ ಮಾಡಿದ್ದಾರೆ. ಈ ವಿಷಯವನ್ನು ಜಸ್ಟೀಸ್ ನಾಗಮೋಹನ್ ದಾಸ್ ಕಮಿಟಿಗೆ ತನಿಖೆಗೆ ಕೊಡಿ ಎಂದು ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು. ಈ ಹಿಂದೆ ಬಿ.ಆರ್ ಪಾಟೀಲ್ ಆರೋಪವನ್ನು ಸಿಎಂ ತಳ್ಳಿಹಾಕಿದ್ದರು. ಯಾರ್ಯಾರ ಪಾತ್ರ ಇದೆ ಅಂತ ತನಿಖೆ ಮಾಡಲು ಆಗ್ರಹ ಮಾಡುತ್ತೇನೆ. ದಾಖಲೆ ಪಡೆದುಕೊಂಡು ತನಿಖೆ ಮಾಡಲಿ ಎಂದು ಒತ್ತಾಯಿಸಿದರು.
ಬಿ ಶಿವರಾಮ್ ಅವರ ಒಬ್ಬರ ಹೇಳಿಕೆ ಅಲ್ಲ. ಅಬಕಾರಿ ಸಚಿವರ ಇಲಾಖೆಯ ತನಿಖೆ ಶುರುವಾಗಿದೆ.
ಸಿದ್ದರಾಮಯ್ಯರ ಪುತ್ರ ವರ್ಗಾವಣೆ ಚರ್ಚೆಗೆ ಗ್ರಾಸವಾಗಿದೆ. ಗ್ಯಾರಂಟಿ ವೈಫಲ್ಯ ವಿಚಾರಗಳೂ ಮುನ್ನಲೆಗೆ ಬಂದಿದೆ ಎಂದು ತಿಳಿಸಿದರು.

ಹೈಕಮಾಂಡ್ ಫುಟ್ಬಾಲಾ ಅನ್ನೋ ವಿಚಾರದ ಹೇಳಿಕೆ ಕುರಿತು ಮಾತನಾಡಿ, ಕೆ.ಎನ್.ರಾಜಣ್ಣ, ಪ್ರಕಾಶ್ ಹುಕ್ಕೇರಿ, ಡಿ.ಕೆ ಸುರೇಶ್ ಹೇಳಿಕೆ ವಿಚಾರ ನೋಡಿದರೆ ಇವರೆಲ್ಲಾ ಹೈಕಮಾಂಡ್ ಇಂದ ದೂರ ಉಳಿಯುವ ಕೆಲಸ ಮಾಡ್ತಿದ್ದಾರೆ. ಇವರೆಲ್ಲರೂ ಹೈಕಮಾಂಡ್‍ನಿಂದ ಅಂತರ ಕಾಯ್ದುಕೊಳ್ತಿರೋದು ಸ್ಪಷ್ಟವಾಗಿದೆ. ಅವರ ಹೇಳಿಕೆಯಲ್ಲೇ ಸ್ಪಷ್ಟತೆ ಇದೆ ಎಂದು ವಿಶ್ಲೇಷಿಸಿದರು. ರಾಜ್ಯಸಭೆ ಚುನಾವಣೆಗೆ ಎರಡನೇ ಅಭ್ಯರ್ಥಿ ಕಣಕ್ಕಿಳಿಸುವ ವಿಚಾರದ ಕುರಿತು ಪ್ರಶ್ನಿಸಿದಾಗ, ಅಂತಹ ವಿಶೇಷ ಚರ್ಚೆ ಏನಿಲ್ಲ. ರಾಜ್ಯಸಭಾ ಚುನಾವಣೆ ಅಭ್ಯರ್ಥಿ ಯಾರಾಗಬೇಕು ಅಂತ ಚರ್ಚೆ ಮಾಡಿದ್ದೇವೆ. ಕೋರ್ ಕಮಿಟಿ ಸಭೆಯಲ್ಲಿ ಅಂತಿಮ ನಿರ್ಣಯವಾಗುತ್ತದೆ ಎಂದರು.

ವಿಜಯೇಂದ್ರರ ನೇತೃತ್ವದಲ್ಲಿ ನಡೆದ ಸಭೆ ವಿಚಾರ ಕುರಿತು ಪ್ರಶ್ನೆಗೆ, ಲೋಕಸಭಾ ಚುನಾವಣಾ ದೃಷ್ಟಿಯಿಂದ ಬೇರೆ ಬೇರೆ ಆಯಾಮಗಳಲ್ಲಿ ಇಂದು ಚರ್ಚೆ ಮಾಡಿದ್ದೇವೆ. ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆಯೂ ಚರ್ಚಿಸಿದ್ದೇವೆ. ಈಗಿರುವ ಅಭ್ಯರ್ಥಿಯನ್ನು ಮುಂದುವರಿಸಿಕೊಂಡು ಹೋಗುವ ಬಗ್ಗೆಯೂ ಚರ್ಚೆಯಾಗಿದೆ. ಹೆಚ್ಚುವರಿ ಮತಗಳ ಮೂಲಕ ಎರಡನೇ ಅಭ್ಯರ್ಥಿ ಆಯ್ಕೆ ಮಾಡಿದರೆ ಸಾಧಕ ಬಾಧಕ ಏನು ಎಂಬ ವಿಷಯದ ಕುರಿತೂ ಚರ್ಚೆ ಆಗಿದೆ. ಕೋರ್ ಕಮಿಟಿ ಸಭೆಯಲ್ಲಿ ಬರುವ ಅಭಿಪ್ರಾಯ ಆಧರಿಸಿ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ. ಎರಡನೇ ಅಭ್ಯರ್ಥಿ ಗೆಲ್ಲಲು ಕೊರತೆಯಾಗುವ ಮತಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆಯೇ ಮತ್ತು ತಟಸ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಾಗುವುದೇ ಎಂಬ ಬಗ್ಗೆಯೂ ಚರ್ಚೆಯಾಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!