ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿಲ್ಲ, ವಿದ್ಯುತ್ ದರ ಹೆಚ್ಚಳದ ವರದಿಗೆ ನಾವು ಒಪ್ಪಿಗೆ ನೀಡಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ವಿದ್ಯುತ್ ದರ ಹೆಚ್ಚಳ ವರದಿಗೆ ಒಪ್ಪಿಗೆ ಸೂಚಿಸಿದೆ. ಹಾಗಾಗಿ ವಿದ್ಯುತ್ ದರ ಹೆಚ್ಚಳವಾಗಿದೆ ಎಂದಿದ್ದಾರೆ.
ಕೆ.ಇ.ಆರ್.ಸಿ ಅದೊಂದು ಸ್ಟೆಚುಟರಿ ಬಾಡಿಯವರು ಮಾರ್ಚ್ನಲ್ಲಿ ಹೆಚ್ಚಳದ ಪ್ರಸ್ತಾವನೆ ಕೊಟ್ಟರೂ ನಾವು ಒಪ್ಪಿಗೆ ನೀಡಿರಲಿಲ್ಲ. ನಾವು ವಿದ್ಯುತ್ ದರ್ ಹೆಚ್ಚಳದ ಯಾವುದೇ ಆದೇಶ ಮಾಡಿಲ್ಲ. ಕಾಂಗ್ರೆಸ್ನವರು ಬಂದ ಮೇಲೆಯೇ ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ. ಅವರ ಆಜ್ಞೆಯಿಂದಲೇ ವಿದ್ಯುತ್ ದರ ಹೆಚ್ಚಳ ಆಗಿದೆ ಎಂದು ತಿಳಿಸಿದರು.
ಏಪ್ರಿಲ್ನಿಂದ ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ. ಇದು ಬಹಳ ದೊಡ್ಡ ಹೊರೆಯಾಗಲಿದೆ. ಬರುವ ದಿನಗಳಲ್ಲಿ ಎಲೆಕ್ಟ್ರಿಸಿಟಿ ಕ್ಷೇತ್ರ ಬಹಳ ಸಂಕಷ್ಟಕ್ಕೆ ಈಡಾಗಲಿದೆ. ಸಾರಿಗೆ ಹಾಗೂ ವಿದ್ಯುತ್ ಕ್ಷೇತ್ರಗಳಗೆ ಹಣ ಕೊಡಬೇಕು. ಒಂದು ವರ್ಷ ಬಿಟ್ಟು ಸಬ್ಸಿಡಿ ಕೊಟ್ಟರೆ ಆಗಲ್ಲ. ಮುಂಗಡವಾಗಿ ಸಬ್ಸಿಡಿ ಕೊಡಬೇಕು ಎಂದರು.
ಹಿಂದಿನ ಬಿಜೆಪಿ ಸರ್ಕಾರವೇ ವಿದ್ಯುತ್ ದರ ಏರಿಕೆ ಮಾಡಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಇತ್ತೀಚೆಗಷ್ಟೇ ವಿದ್ಯುತ್ ದರ ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಸ್ಪಷ್ಟನೆ ನೀಡಿದ್ದರು.
ಸಿಎಂ ಸಿದ್ದರಾಮಯ್ಯ ನೀಡಿದ ಸ್ಪಷ್ಟನೆ ಹೀಗಿದೆ:
ಕಾಂಗ್ರೆಸ್ ಸರ್ಕಾರ ವಿದ್ಯುತ್ ದರ ಹೆಚ್ಚಳ ಮಾಡಿದೆ ಎಂದು ವಿಪಕ್ಷಗಳು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿವೆ. ದರ ಏರಿಕೆ ನಿರ್ಧಾರ ಹಿಂದಿನ ಬಿಜೆಪಿ ಸರ್ಕಾರದ ಆಡಳಿತದ ಸಂದರ್ಭದಲ್ಲಿ ನಿರ್ಧಾರವಾಗಿತ್ತು. ಚುನಾವಣಾ ನೀತಿಸಂಹಿತೆ ಜಾರಿಗೆ ಬಂದಿದ್ದರಿಂದ ದರ ಬದಲಾವಣೆ ಜಾರಿಯಾಗಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಜೂ.11ರಂದು ಸ್ಪಷ್ಟನೆ ನೀಡಿದ್ದರು.