ಪ್ರದೀಪ್ ಆತ್ಮಹತ್ಯೆ ಪ್ರಕರಣ | ತನಿಖೆಗೆ ಸಂಪೂರ್ಣ ಸಹಕರಿಸುತ್ತೇನೆ: ಅರವಿಂದ ಲಿಂಬಾವಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಎಫ್​​ಐಆರ್ (FIR) ದಾಖಲಾಗಿದ್ದು, ಹೀಗಾಗಿ ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ಆತ್ಮಹತ್ಯೆಗೆ ಶರಣಾದ ಪ್ರದೀಪ್ ನಮ್ಮ ಕಾರ್ಯಕರ್ತನೇ. ಆತನ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
ಪ್ರದೀಪ್ ಚುನಾವಣೆಯಲ್ಲಿ ಸೋಶಿಯಲ್ ಮೀಡಿಯಾದ ಗುತ್ತಿಗೆ ತೆಗೆದುಕೊಂಡಿದ್ದ. ವಾರ್ಡ್‌ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದ. ಜೂನ್‌, ಜುಲೈನಲ್ಲಿ ನಮ್ಮ ಪಕ್ಷದ ಕಚೇರಿಗೆ ಬಂದಿದ್ದ. ಜನತಾ ದರ್ಶನದ ವೇಳೆ ನನ್ನನ್ನು ಭೇಟಿಯಾಗಿದ್ದು ನಿಜ. ನನಗೆ ಸಮಸ್ಯೆಯಾಗಿದೆ ಎಂದು ನನ್ನ ಬಳಿ ಹೇಳಿದ್ದ. ಆತ ನೀಡಿದ್ದ ಸಂಖ್ಯೆಗೆ ಫೋನ್‌ಗೆ ಮಾಡಿ ಹಣ ನೀಡುವಂತೆ ಹೇಳಿದ್ದೆ. ಕೊರೋನಾ ಹಿನ್ನೆಲೆ ಸ್ವಲ್ಪ ಸಮಯ ನೀಡುವಂತೆ ಕೂಡ ಹೇಳಿದ್ದೆ. ಬಳಿಕವೂ ಫೋನ್‌ ಮಾಡಿ ಕೂಡಲೇ ಹಣ ನೀಡುವಂತೆ ಹೇಳಿದ್ದೆ. ಪರಸ್ಪರ ಕುಳಿತು ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದೆ ಎಂದು ಹೇಳಿದರು.

ಬಳಿಕ ಭೂಮಿ ಪೂಜೆಯಲ್ಲಿ ಭೇಟಿಯಾಗಿದ್ದ. ಆಗ ಸಮಸ್ಯೆ ಬಗೆಹರಿದಿದೆ ಎಂದು ನನಗೆ ಥ್ಯಾಂಕ್ಸ್‌ ಸಹ ಹೇಳಿದ್ದನು. ನಂತರ ಕೌಟುಂಬಿಕ ಕಲಹ ಬಗ್ಗೆಯೂ ನನಗೆ ಮಾಹಿತಿ ನೀಡಿದ್ದ. ಬೆಳ್ಳಂದೂರು ಠಾಣೆಗೆ ಪತ್ನಿ ದೂರು ನೀಡಿದ ಬಗ್ಗೆ ಮಾಹಿತಿ ನೀಡಿದ್ದನು. ಕೂಡಲೇ ಇನ್ಸ್‌ಪೆಕ್ಟರ್‌ಗೆ ಫೋನ್‌ ಮಾಡಿ ವಿಚಾರಗಳನ್ನು ಪಡೆದುಕೊಂಡು ಪತ್ನಿ ಒಪ್ಪಿದ್ರೆ ಸಮಸ್ಯೆ ಬಗೆಹರಿಸುವಂತೆ ಇನ್ಸ್‌ಪೆಕ್ಟರ್‌ಗೆ ತಿಳಿಸಿದ್ದೆ. ಈ ವಿಚಾರದಲ್ಲಿ ರಾಜಿ ಮಾಡಿಸಿದ್ದು ನಿಜ. ಅದು ಬಿಟ್ಟು ಮತ್ತೆ ಭೇಟಿಯಾಗಿರಲಿಲ್ಲ. ಸಮಸ್ಯೆ ಹೇಳಿಕೊಂಡು ಜನಪ್ರತಿನಿಧಿಗಳ ಬಳಿ ಬರುವುದು ಸಹಜ. ಆದ್ರೆ ಪ್ರದೀಪ್ ಆತ್ಮಹತ್ಯೆ ಹಂತಕ್ಕೆ ಹೋಗಿದ್ದು ವಿಷಾದನೀಯ ಎಂದರು.

ಪ್ರದೀಪ್‌ ಡೆತ್‌ನೋಟ್‌ನಲ್ಲಿ ನನ್ನ ಹೆಸರು ಉಲ್ಲೇಖಿಸಿದ್ದಾರೆ. ಪ್ರಕರಣದ ತನಿಖೆಗೆ ನಾನು ಸಂಪೂರ್ಣ ಸಹಕರಿಸುತ್ತೇನೆ. ಇಂತಹ ವಿಚಾರದಲ್ಲಿ ಸಹಾಯ ಮಾಡುವಾಗ ಎಚ್ಚರಿಕೆಯಿಂದ ಇರಿ. ಜನಪ್ರತಿನಿಧಿಗಳಿಗೆ ನಾನು ಸಲಹೆ ನೀಡುತ್ತೇನೆ. ಅನ್ಯಾಯವಾಗಿದೆ ಎಂದು ಯಾರೇ ಬಂದ್ರೂ ಸಹಾಯ ಮಾಡುತ್ತೇನೆ. ಇನ್ನು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವ ಉಳಿದ ಆರೋಪಿಗಳ ಪರಿಚಯ ಕೂಡ ಇದೆ. ನಾನು ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿಲ್ಲ, ಕೇವಲ ಫೋನ್‌ನಲ್ಲಿ ಚರ್ಚೆ ಮಾಡಿದ್ದೇನೆ. ಸೆಟಲ್ ಮಾಡಿಕೊಳ್ಳಿ ಎಂದು ಒತ್ತಡ ಹಾಕಿದ್ದು ನಿಜ ಎಂದರ.

ಕೌಟುಂಬಿಕ ಕಲಹ ವಿಚಾರದಲ್ಲಿ ಒಮ್ಮೆ ಮಧ್ಯರಾತ್ರಿ ಫೋನ್ ಮಾಡಿದ್ರು. ಮಧ್ಯರಾತ್ರಿಯಲ್ಲೂ ನಾನು ಪ್ರದೀಪ್‌ಗೆ ಸಹಾಯ ಮಾಡಿದ್ದೇನೆ. ಈ ಪ್ರಕರಣದಲ್ಲಿ ನನ್ನ ಹೆಸರು ಸೇರಿಸಿದ್ದಕ್ಕೆ ಹೆಚ್ಚು ಮಹತ್ವ ಸಿಕ್ಕಿದೆ. ಸಂಧಾನದ ಹೆಸರಿನಲ್ಲಿ ನನಗೆ ಹಣ ಕೊಟ್ಟಿದ್ದಾರೆ ಎಂಬುದು ಸುಳ್ಳು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!