ಚಂದ್ರನ ಅಂಗಳದಲ್ಲಿ ಶತಕ ಬಾರಿಸಿದ ಪ್ರಗ್ಯಾನ್‌ ರೋವರ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಂದ್ರಯಾನ-3 ಚಂದ್ರನ ಅಂಗಳದಲ್ಲಿ ಪ್ರಜ್ಞಾನ್ ರೋವರ್ ಶತಕ ಬಾರಿಸಿದೆ .
ಚಂದ್ರನ ದಕ್ಷಿಣ ಧ್ರುವದಲ್ಲಿ ಪರಿಶೋಧನೆಯಲ್ಲಿ ತೊಡಗಿಕೊಂಡಿರುವ ಪ್ರಗ್ಯಾನ್‌ ರೋವರ್‌, 100 ಮೀಟರ್‌ ಪ್ರಯಾಣವನ್ನು ಪೂರ್ತಿ ಮಾಡಿದೆ ಎಂದು ಇಸ್ರೋ ಟ್ವೀಟ್‌ ಮೂಲಕ ತಿಳಿಸಿದೆ.

ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥ್‌ ಕೂಡ ಈ ಮಾಹಿತಿ ಹಂಚಿಕೊಂಡಿದ್ದಾರೆ. ಅದರೊಂದಿಗೆ ಶಿವಶಕ್ತಿ ಪಾಯಿಂಟ್‌ನಿಂದ ಪ್ರಗ್ಯಾನ್‌ ರೋವರ್‌ ಸಾಗಿರುವ ಹಾದಿಯ ನಕ್ಷೆಯನ್ನೂ ಕೂಡ ಇಸ್ರೋ ಬಿಡುಗಡೆ ಮಾಡಿದೆ. ‘ಇತ್ತೀಚೆಗೆ ಚಂದ್ರನ ಮೇಲೆ, ಪ್ರಗಾನ್ ರೋವರ್ 100 ಮೀಟರ್‌ಗಳನ್ನು ಕ್ರಮಿಸಿದೆ ಮತ್ತು ಪ್ರಯಾಣ ಮುಂದುವರಿಯುತ್ತದೆ’ ಎಂದು ಇಸ್ರೋ ಟ್ವೀಟ್‌ ಮಾಡಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಶಿವಶಕ್ತಿ ಪಾಯಿಂಟ್‌ನಲ್ಲಿ ನಿಂತ ವಿಕ್ರಮ್‌ ಲ್ಯಾಂಡರ್‌ನಿಂದ ಪಶ್ಚಿಮಕ್ಕೆ ಆ ಬಳಿಕ ಸ್ವಲ್ಪ ಮಟ್ಟಿಗೆ ಉತ್ತರಕ್ಕೆ ಪ್ರಗ್ಯಾನ್‌ ರೋವರ್‌ ಚಲಿಸಿದ್ದು, ಇಲ್ಲಿಯವರೆಗೂ 101.4 ಮೀಟರ್‌ ದೂರವನ್ನು ಕ್ರಮಿಸಿದೆ ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ. ಇದರ ಬೆನ್ನಲ್ಲಿಯೇ ಇನ್ನರೆಡು ಅಥವಾ ಮೂರು ದಿನಗಳಲ್ಲಿ ಪ್ರಗ್ಯಾನ್‌ ರೋವರ್‌ ಹಾಗೂ ವಿಕ್ರಮ್‌ ಲ್ಯಾಂಡರ್‌ ನಿದ್ರಾಸ್ಥಿತಿಗೆ ಹೋಗಲಿದೆ ಎಂದು ಇಸ್ರೋ ಅಧ್ಯಕ್ಷ ಮಾಹಿತಿ ನೀಡಿದ್ದಾರೆ.

ಲ್ಯಾಂಡರ್‌ ಹಾಗೂ ರೋವರ್‌ ಈಗಲೂ ಉತ್ತಮವಾಗಿ ಕಾರ್ಯನಿವರ್ಹಿಸುತ್ತಿದೆ. ನಮ್ಮ ಟೀಮ್‌ ಕೂಡ ಇದರಲ್ಲಿನ ವೈಜ್ಞಾನಿಕ ಉಪಕರಣಗಳನ್ನು ಬಳಸಿಕೊಂಡು ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಉತ್ತಮ ಸುದ್ದಿ ಏನೆಂದರೆ, ನಮ್ಮ ರೋವರ್‌ ಅಂದಾಜು 100 ಮೀಟರ್‌ ದೂರ ಪ್ರಯಾಣ ಕೂಡ ಮಾಡಿದೆ. ಲ್ಯಾಂಡರ್‌ ಇದ್ದ ಸ್ಥಳದಿಂದ 100 ಮೀಟರ್‌ ಪ್ರಯಾಣ ಮಾಡಿದೆ. ಶೀಘ್ರದಲ್ಲಿಯೇ ನಾವು ಲ್ಯಾಂಡರ್‌ ಹಾಗೂ ರೋವರ್‌ ಎರಡೂ ಕೂಡ ನಿದ್ರಾಸ್ಥಿತಿಗೆ ದೂಡುವಂಥ ಪ್ರಯತ್ನ ಮಾಡಲಿದ್ದೇವೆ. ಮುಂದಿನ ಒಂದು ಅಥವಾ 2 ದಿನಗಳಲ್ಲಿ ಈ ಕೆಲಸ ನಡೆಯಲಿದೆ. ಯಾಕೆಂದರೆ, ಆ ಸಮಯದಲ್ಲಿ ಚಂದ್ರನಲ್ಲಿ ರಾತ್ರಿಯಾಗುತ್ತದೆ. ಇನ್ನು 14 ದಿನಗಳ ಬಳಿಕ ನಾವು ಅವರಿಬ್ಬರಿಂದ ಸಂವಹನ ಸಾಧಿಸಲು ಪ್ರಯತ್ನ ಮಾಡುತ್ತೇವೆ ಎಂದು ಎಸ್‌ ಸೋಮನಾಥ್‌ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!