ಪ್ರಜ್ವಲ್‌ ಪ್ರಕರಣ: ಎಚ್‌.ಡಿ. ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು ಅಂತ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಹಾಗೂ ಎಚ್.ಡಿ. ರೇವಣ್ಣ ವಿರುದ್ಧದ ಅಪಹರಣ ಕೇಸ್‌ಗೆ ಸಂಬಂಧಪಟ್ಟಂತೆ ಎಸ್‌ಐಟಿ ತನಿಖೆಯನ್ನು ಚುರುಕುಗೊಳಿಸಿದೆ. ಇನ್ನು ಎಚ್.ಡಿ. ರೇವಣ್ಣ ನಿವಾಸದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಸವನಗುಡಿಯ ನಿವಾಸದಲ್ಲಿ ಮಹಜರು ಮಾಡಲಾಗಿದೆ.

ಎಸ್ ಐ ಟಿ ಅಧಿಕಾರಿಗಳು ಶಾಸಕ ಎಚ್ ಡಿ ರೇವಣ್ಣ ಅವರ ನಿವಾಸದಲ್ಲಿ ಸತತವಾಗಿ 5 ಗಂಟೆಗಳ ಕಾಲ ಸ್ಥಳ ಮಹಜರು ನಡೆಸಿದ್ದು ಇದೀಗ ಮುಕ್ತಾಯವಾಗಿದೆ.

ಸಿಐಡಿ ಸೈಬರ್‌ಸೆಲ್‌ನಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣದ ಸ್ಥಳವನ್ನು ಎಸ್‌ಐಟಿ ಅಧಿಕಾರಿಗಳು ಮಹಜರು ಮಾಡಿದ್ದಾರೆ.

ಈಗಾಗಲೇ ನ್ಯಾಯಾಧೀಶರ ಎದುರು ಕಳೆದ ಶುಕ್ರವಾರ (ಮೇ 3) ಸಿಎಆರ್‌ಪಿಸಿ 164 ಅಡಿಯಲ್ಲಿ ಸಂತ್ರಸ್ತ ಮಹಿಳೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ವಿಚಾರಣೆ ವೇಳೆ ತನ್ನನ್ನು ಹಾಸನದ ಎಂಪಿ ಕ್ವಾಟ್ರರ್ಸ್‌ ಮಾತ್ರವಲ್ಲದೆ ಬೆಂಗಳೂರಿನ ನಿವಾಸದಲ್ಲಿ ಸಹ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದರು. ಹೀಗಾಗಿ ಅತ್ಯಾಚಾರ ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿರುವ ಎಚ್.ಡಿ. ರೇವಣ್ಣ ಅವರ ಬಸವನಗುಡಿ ನಿವಾಸದೆದುರು ಮಹಜರು ಮಾಡಲಾಗಿದೆ .

ನೋಟಿಸ್ ಕೊಟ್ಟು ನಮ್ಮನ್ನು ಮನೆಯ ಒಳಗೆ ಬಿಟ್ಟಿಲ್ಲ: ವಕೀಲ ಗೋಪಾಲ್
ಎಚ್‌.ಡಿ. ರೇವಣ್ಣ ಪರ ವಕೀಲ ಗೋಪಾಲ್ ಪ್ರತಿಕ್ರಿಯೆ ನೀಡಿ, ಈಗಾಗಲೇ ಹಲವಾರು ವಿಚಾರಗಳು ಎಲ್ಲರಿಗೂ ತಿಳಿದಿದೆ. ನಮ್ಮ‌ ಕಕ್ಷಿದಾರ ಎಚ್.ಡಿ. ರೇವಣ್ಣ ಅವರ ಹೊಳೆನರಸೀಪುರ ಮನೆಯಲ್ಲಿ ಮಹಜರು ನಡೆದಿದೆ. ಎರಡು ಪ್ರಕರಣಗಳಲ್ಲಿ ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಮಹಜರು ಮಾಡುವ ಸಂದರ್ಭದಲ್ಲಿ ನೋಟಿಸ್ ಕೊಡಬೇಕು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ‌ ಮಹಜರು ಪ್ರಕ್ರಿಯೆ ಮಾಡಲಾಗಿದೆ. ಭವಾನಿ ರೇವಣ್ಣ ಅವರು ಮಹಜರು ಪ್ರಕ್ರಿಯೆಗೆ ಅನುಮತಿ ನೀಡಿದ್ದಾರೆ. ಹೊಳೆನರಸೀಪುರದಲ್ಲಿ ಮಹಜರು ನಡೆದಾಗ ನೋಟಿಸ್ ನೀಡಿದರು. ನನ್ನ ಕಡೆಯಿಂದ ಅವರಿಗೆ ಸಹಕಾರ ನೀಡಿದ್ದೇನೆ. ಹೊಳೆನರಸೀಪುರ ಮಹಜರು ಸಂದರ್ಭದಲ್ಲಿ 4-5-2024ರಲ್ಲಿ ಬಸವನಗುಡಿ ಮನೆಯಲ್ಲಿ ಮಹಜರು ಮಾಡಲು‌ ಸಹಕಾರ ಕೇಳಿದರು. ಈ ಬಗ್ಗೆ ಎಸ್‌ಐಟಿಯಿಂದ ನೋಟಿಸ್ ನೀಡಲಾಗಿದೆ. ನೋಟಿಸ್ ಕೊಟ್ಟು, ನಮ್ಮನ್ನು ಮನೆಯ ಒಳಗೆ ಬಿಟ್ಟಿಲ್ಲ. ಬಸವನಗುಡಿಯ ಮನೆಯ‌‌ ಮಹಜರು ಸಂದರ್ಭದಲ್ಲಿ ನನಗೆ‌ ಮನೆಯೊಳಗೆ ಅನುಮತಿ ನೀಡಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!