ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ‘ಎಕ್ಸ್’ ನಿಂದ ಗೇಟ್ ಪಾಸ್ ನೀಡಲಾಗಿದ್ದು, ವೇರಿಫೈಡ್ ಅಕೌಂಟ್ ಸ್ಟೇಟಸ್‌ನಿಂದ ಪ್ರಜ್ವಲ್ ಹೊರಬಿದ್ದಿದ್ದಾರೆ. ಅವರಿಗಿದ್ದ ಬ್ಲ್ಯೂ ಟಿಕ್ ಮಾನ್ಯತೆ ಈಗ ಅಮಾನ್ಯಗೊಂಡಿದೆ.
ಎಕ್ಸ್ ಈ ಮೊದಲು ಟ್ವಿಟರ್ ಆಗಿತ್ತು. ಆಗಿನಿಂದಲೂ ಅಫೀಶಿಯಲ್ ಖಾತೆದಾರರಿಗೆ ಬ್ಲ್ಯೂ ಟಿಕ್ ಅನ್ನು ನೀಡಲಾಗುತ್ತಿತ್ತು. ಆದರೆ, ಎಲಾನ್ ಮಸ್ಕ್ ಟ್ವಿಟರ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ನಂತರ ಹಲವು ಬದಲಾವಣೆಯನ್ನು ತಂದರು. ಬ್ಲ್ಯೂ ಟಿಕ್ ಬೇಕೆಂದರೆ ಹಣ ಪಾವತಿ ಮಾಡಬೇಕು ಎಂಬ ನಿಯಮವನ್ನು ಸಹ ತರಲಾಗಿದೆ. ಈಗ ಹಣ ಪಾವತಿ ಮಾಡಿಲ್ಲವೆಂದಾದರೆ ಅಥವಾ ಆ ಖಾತೆ ಬಗ್ಗೆ ದೂರುಗಳು ಬಂದರೆ ಬ್ಲ್ಯೂಟಿಕ್ ಅನ್ನು ವಾಪಸ್ ಪಡೆಯುವ ಅಧಿಕಾರವನ್ನು ಎಕ್ಸ್ ಹೊಂದಿದೆ. ಹೀಗಾಗಿ ಇಲ್ಲಿ ಪ್ರಜ್ವಲ್ ರೇವಣ್ಣ ಅವರಿಗಿದ್ದ ಬ್ಲ್ಯೂ ಟಿಕ್ ಮಾನ್ಯತೆ ಈಗ ಅಮಾನ್ಯಗೊಂಡಿದೆ.