ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಯ ಸಾಗಣೆಗೆ ಎದುರಾಗಿದ್ದ ದೊಡ್ಡ ವಿಘ್ನವೊಂದು ಈಗ ನಿವಾರಣೆಯಾಗಿದೆ. ಮಹಾರಾಷ್ಟ್ರದಲ್ಲಿ ಲ್ಯಾಬ್ ಟೆಸ್ಟಿಂಗ್ ನೆಪದಲ್ಲಿ ದಿನಗಟ್ಟಲೆ ತಡೆಹಿಡಿಯಲಾಗಿದ್ದ ರಾಜ್ಯದ ಅಡಿಕೆ ಲೋಡ್‌ಗಳ ತುರ್ತು ಬಿಡುಗಡೆಗಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ನಡೆಸಿದ ಸಂಧಾನ ಯಶಸ್ವಿಯಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಜೋಶಿ ಅವರು ನಡೆಸಿದ ಮಾತುಕತೆಯಿಂದಾಗಿ ಅಡಿಕೆ ಬೆಳೆಗಾರರು ಮತ್ತು ವರ್ತಕರು ನಿಟ್ಟುಸಿರು ಬಿಡುವಂತಾಗಿದೆ.
ಸಹಕಾರಿ ಸಂಸ್ಥೆಗಳ ಕಳವಳ ಮತ್ತು ತಕ್ಷಣದ ಕ್ರಮ
ರಾಜ್ಯದ ಪ್ರಮುಖ ಅಡಿಕೆ ಸಹಕಾರಿ ಸಂಸ್ಥೆಗಳಾದ ಕ್ಯಾಂಪ್ಕೋ, ಮಾಮ್ಕೋಸ್, ತುಮ್ಕೋಸ್ ಹಾಗೂ ಕರ್ನಾಟಕ ರಾಜ್ಯ ಅಡಿಕೆ ಸಹಕಾರಿ ಮಹಾಮಂಡಳದ ಪದಾಧಿಕಾರಿಗಳು ಇತ್ತೀಚೆಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದರು. ವಾಹನಗಳ ಅನಗತ್ಯ ತಡೆಯಿಂದಾಗಿ ಉತ್ತರ ಭಾರತದ ಮಾರುಕಟ್ಟೆಗಳಿಗೆ ತಲುಪಬೇಕಾದ ಕೋಟ್ಯಂತರ ರೂಪಾಯಿ ಮೌಲ್ಯದ ಸರಕು ಹಾಳಾಗುತ್ತಿದೆ ಮತ್ತು ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ ಎಂದು ನಿಯೋಗ ವಿವರಿಸಿತ್ತು. ಪರಿಸ್ಥಿತಿಯ ಗಂಭೀರತೆ ಅರಿತ ಜೋಶಿ ಅವರು ತಕ್ಷಣವೇ ಮಹಾರಾಷ್ಟ್ರ ಸಿಎಂ ಗಮನಕ್ಕೆ ವಿಷಯ ತಂದರು.
ಮಹಾರಾಷ್ಟ್ರ ಸಿಎಂ ಸಕಾರಾತ್ಮಕ ಭರವಸೆ
ಕೇಂದ್ರ ಸಚಿವರ ಮನವಿಗೆ ತಕ್ಷಣ ಸ್ಪಂದಿಸಿದ ಸಿಎಂ ದೇವೇಂದ್ರ ಫಡ್ನವೀಸ್, ಸದ್ಯ ತಡೆ ಹಿಡಿಯಲಾಗಿರುವ ಅಧಿಕೃತ ಅಡಿಕೆ ವಾಹನಗಳನ್ನು ತಕ್ಷಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಇಂತಹ ತೊಂದರೆ ಆವರ್ತನೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಯಶಸ್ವಿ ಸಭೆಯಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಶಾಸಕರಾದ ಆರಗ ಜ್ಞಾನೇಂದ್ರ, ರಾಜೇಶ್ ನಾಯ್ಕ್ ಉಪಸ್ಥಿತರಿದ್ದರು. ರೈತರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಜೋಶಿ ಟ್ವೀಟ್ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.



