ಭಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಸಿ: ಸಂಸದ ಪ್ರತಾಪ್ ಸಿಂಹ ಒತ್ತಾಯ

ಹೊಸದಿಗಂತ ವರದಿ, ಮಡಿಕೇರಿ
‘ಭಗವದ್ಗೀತೆ’ಯಲ್ಲಿ ಜೀವನದ ಮೌಲ್ಯಗಳಿದ್ದು, ಪ್ರತಿಯೊಬ್ಬರೂ ತಿಳಿದುಕೊಳ್ಳಲೇ ಬೇಕಾದ ವಿಚಾರಗಳಿದೆ. ಆದ್ದರಿಂದ ರಾಜ್ಯ ಸರಕಾರ ಇದನ್ನು ಪಠ್ಯದಲ್ಲಿ ಸೇರಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಭಗವದ್ಗೀತೆ ಕೇವಲ ಧಾರ್ಮಿಕ ಪುಸ್ತಕವಲ್ಲ. ಇದರಲ್ಲಿ ಪ್ರತಿಯೊಬ್ಬರ ಬದುಕಿಗೆ ಅತ್ಯವಶ್ಯಕವಾದ ನೀತಿ ಪಾಠ, ನೈತಿಕ ವಿಚಾರಗಳಿವೆ. ಸರಿ ತಪ್ಪುಗಳ ಪರಾಮರ್ಶೆ ಮಾಡಿಕೊಳ್ಳಲು, ವಿವೇಚನೆ ಬೆಳೆಸಿಕೊಳ್ಳಲು, ನೈತಿಕತೆಯನ್ನು ಮೂಡಿಸಿಕೊಳ್ಳಲು ಭಗವದ್ಗೀತೆ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಬೈಬಲ್ ಹಾಗೂ ಖುರಾನ್’ಗಳು ಕೂಡಾ ಧಾರ್ಮಿಕ ಗ್ರಂಥಗಳಾದರೂ, ಭಗವದ್ಗೀತೆಯಂತಲ್ಲ. ಭಗವದ್ಗೀತೆ ಯಾವುದು ಸರಿ ಯಾವುದು ತಪ್ಪು, ಯಾವುದು ನ್ಯಾಯ, ಅನ್ಯಾಯ ಎಂಬುದನ್ನು ಬೋಧಿಸುತ್ತದೆ. ಅದರಲ್ಲಿ ಜೀವನದ ಪಾಠವಿದೆ. ಹೀಗಾಗಿ ಭಗವದ್ಗೀತೆಯನ್ನು ಒಂದು ಧರ್ಮಗ್ರಂಥ ಎಂದು ಭಾವಿಸಬೇಕಾಗಿಲ್ಲ ಎಂದು ನುಡಿದರು.
ಸಂವಿಧಾನಕ್ಕಿಂತ ಧರ್ಮ ದೊಡ್ಡದಲ್ಲ:
ಹಿಜಾಬ್ ಬಗ್ಗೆ ನ್ಯಾಯಾಲಯ ತೀರ್ಪು ನೀಡಿದ್ದರೂ, ತೀರ್ಪಿನ ವಿರುದ್ಧ ಕೆಲವರು ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟಿಸಿದ್ದು ಸರಿಯಲ್ಲ. ದೇಶದ ಸಂವಿಧಾನಕ್ಕಿಂತ ಧರ್ಮವೇ ದೊಡ್ಡದು ಎಂಬ ಇಂತಹವರ ವರ್ತನೆ ಖಂಡನೀಯ ಎಂದರು.
ನಾವು ಬಾಳುತ್ತಿರುವ ದೇಶದ ಸಂವಿಧಾನವನ್ನು ಗೌರವಿಸುವುದು ಅತ್ಯಂತ ಮುಖ್ಯ. ನಂತರವೇ ನಮ್ಮ ಉಡುಗೆ ತೊಡುಗೆ. ಆದ್ದರಿಂದ ನ್ಯಾಯಾಲಯದ ತೀರ್ಪು ಗೌರವಿಸುವಂತಾಗಬೇಕು ಎಂದು ಸಂಸದರು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ.ಜಿ.ಬೋಪಯ್ಯ, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ, ಮಡಿಕೇರಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಅಶ್ವಿನ್, ಪ್ರಮುಖರಾದ ನಾಗೇಶ್ ಕುಂದಲ್ಪಾಡಿ, ಸುಬ್ರಹ್ಮಣ್ಯ ಉಪಾಧ್ಯಾಯ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!