ಹೊಸದಿಗಂತ ವರದಿ,ಮಂಗಳೂರು:
ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ 2022 ರ ಜು.26 ರಂದು ರಾತ್ರಿ ನಡೆದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಲೆಮರೆಸಿಕೊಂಡಿರುವ ಮೂರು ಮಂದಿ ಆರೋಪಿಗಳ ಸುಳಿವು ನೀಡಿದವರಿಗೆ ತಲಾ ಎರಡು ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.
ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಒಟ್ಟು ಮೂರು ಮಂದಿ ಆರೋಪಿಗಳ ಪತ್ತೆಗೆ ರಿವಾರ್ಡ್ ವಾಂಟೆಡ್ ನೋಟಿಸ್ ಜಾರಿಗೊಳಿಸಲಾಗಿದೆ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ನೌಷದ್(32), ಕೊಡಗು ಸೋಮವಾರಪೇಟೆಯ ಚೌಡ್ಲಿ ನಿವಾಸಿ, ಆರೋಪಿ ಅಬ್ದುಲ್ ನಾಸಿರ್(40), ಸೋಮವಾರಪೇಟೆಯ ಹನಗಲ್ ಕಲಂದಕೂರ್ ನಿವಾಸಿ, ಅಬ್ದುಲ್ ರಹಿಮಾನ್(36) ಇವರು ತಲೆಮರಿಸಿಕೊಂಡಿದ್ದು. ಇವರ ಪತ್ತಗೆ ನಗದು ಬಹುಮಾನ ಘೋಷಿಸಲಾಗಿದೆ.
ಪ್ರಕರಣದಲ್ಲಿ ಒಟ್ಟು 20 ಮಂದಿ ಭಾಗಿಯಾಗಿರುವ ಕುರಿತಂತೆ ಎನ್‌ಐಎ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಹೆಚ್ಚಿನ ಆರೋಪಿಗಳ ಬಂಧನವಾಗಿದ್ದು, ಮೂರು ಮಂದಿ ಆರೋಪಿಗಳ ಸುಳಿವು ಇನ್ನೂ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಎನ್‌ಐಎ ರಿವಾರ್ಡ್ ವಾಂಟೆಡ್ ನೋಟಿಸ್ ಜಾರಿಗೊಳಿಸಿದೆ.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಒಟ್ಟು 20 ಆರೋಪಿಗಳ ವಿರುದ್ಧ 1500 ಪುಟಗಳ ಆರೋಪ ಪಟ್ಟಿಯನ್ನು ಎನ್‌ಐಎ ತಂಡ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿತ್ತಿ.ಅಲ್ಲದೆ 240 ಸಾಕ್ಷಿದಾರರ ಹೇಳಿಕೆ ದಾಖಲಿಸಿತ್ತು.