ಹೊಸದಿಗಂತ ವರದಿ ಮಡಿಕೇರಿ:
ದಕ್ಷಿಣ ಕನ್ನಡ ಜಿಲ್ಲೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿರುವ ರಾಷ್ಟೀಯ ತನಿಖಾ ದಳ (ಎನ್ಐಎ) ಗುರುವಾರ ಬೆಳ್ಳಂಬೆಳಗ್ಗೆ ಕೊಡಗಿನ ಹಲವೆಡೆ ದಾಳಿ ನಡಸಿದೆ.
ಕೊಡಗಿನ ನಾಲ್ಕು ಕಡೆ ಏಕಕಾಲಕ್ಕೆ ದಾಳಿ ನಡೆಸಿರುವ ಎನ್ಐಎ, ಮಡಿಕೇರಿಯ ಮುಸ್ತಾಫ (ಚಿಲ್ಲಿ), ಸೋಮವಾರಪೇಟೆಯ ಹೊಸತೋಟ ನಿವಾಸಿ, ಸೋಮವಾರಪೇಟೆಯಲ್ಲಿ ಕರಿಮೆಣಸು,ಕಾಫಿ ವ್ಯಾಪಾರಿಯಾಗಿರುವ ಜುನೈದ್ ಎಂಬವರನ್ನು ವಶಕ್ಕೆ ಪಡೆದಿರುವುದಾಗಿ ಹೇಳಲಾಗಿದೆ.
ಮತ್ತೊಂದೆಡೆ ಪ್ರವೀಣ್ ನೆಟ್ಟಾರು ಪ್ರಕರಣದ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದರೆನ್ನಲಾದ ಚೌಡ್ಲು ಗ್ರಾಮದ ತೌಶಿಕ್ ಮತ್ತು ಸುಂಟಿಕೊಪ್ಪದ ಮಾದಾಪುರ ರಸ್ತೆಯ ಹನೀಫ್ ಎಂಬವರ ಮನೆಯ ಮೇಲೂ ದಾಳಿ ಮಾಡಿರುವ ಎನ್ಐಎ ಸಿಬ್ಬಂದಿಗಳು ಗಂಟೆಗಟ್ಟಲೆ ವಿಚಾರಣೆ ನಡೆಸುವುದರೊಂದಿಗೆ ದಾಖಲೆಗಳಿಗಾಗಿ ಶೋಧ ನಡೆಸಿದ್ದಾರೆ.
ಹಿಂದೂಪರ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು 2022ರಲ್ಲಿ ಬೆಳ್ಳಾರೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆಯ ನಂತರ ಇಡೀ ಕರಾವಳಿ ಉದ್ವಿಗ್ನಗೊಂಡಿತ್ತು. ಪ್ರಕರಣದ ಬಹುಪಾಲು ಆರೋಪಿಗಳು ಕೊಡಗಿನಲ್ಲಿ ತಲೆಮರೆಸಿಕೊಂಡಿದ್ದುದು ತನಿಖೆಯ ಸಂದರ್ಭ ಬೆಳಕಿಗೆ ಬಂದಿತ್ತು. ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದ ಹಿನ್ನೆಲೆಯಲ್ಲಿ ಗುರುವಾರ ಕೊಡಗಿನ ಹಲವೆಡೆ ಬೆಳ್ಳಂಬೆಳಗ್ಗೆ ದಾಳಿ ಮಾಡಿರುವ ಎನ್ಐಎ ತಂಡಗಳು ತನಿಖೆ ನಡೆಸಿರುವುದಾಗಿ ತಿಳಿದು ಬಂದಿದೆ.