ಲಿಡ್ಕರ್ ಮೂಲಕ ಸ್ವಯಂ ಉದ್ಯೋಗಕ್ಕೆ ಆದ್ಯತೆ : ಸಿಎಂ ಬಸವರಾಜ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ರಾಜ್ಯದ ಪ್ರತಿ ತಾಲೂಕಿನಲ್ಲಿ 100 ಹೆಚ್ಚುವರಿ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡಲು ತೀರ್ಮಾನಿಸಲಾಗಿದ್ದು, ಲಿಡ್ಕರ್ ಯುವಕರಿಗೆ ಉದ್ಯೋಗ ಕಲ್ಪಿಸಲು ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಮತ್ತು ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಆಯೋಜಿಸಿದ ರಾಜ್ಯ ಮಟ್ಟದ ಚರ್ಮ ಕುಶಲಕರ್ಮಿಗಳ ಸಮಾವೇಶ ಹಾಗೂ ಚರ್ಮ ಕರಕುಶಲ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಲಿಡ್ಕರ್ ನಿಗಮಕ್ಕೆ ಈ ಬಾರಿ ₹ 25 ಕೋಟಿಗಳ ಅನುದಾನವನ್ನು ಮೀಸಲಿಡಲಾಗಿದೆ. ನಿಗಮವು ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಿದ್ದಲ್ಲಿ ಪೂರಕ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು. ಯುವಕರಿಗೆ ಉದ್ಯೋಗ ನೀಡುವ ಮೂಲಕ ಸ್ವಾಭಿಮಾನದ ಸ್ವಾವಲಂಬಿ ಬದುಕು ನಡೆಸಲು ಅನುವು ಮಾಡಿಕೊಡಬೇಕು. ಚರ್ಮೋದ್ಯಮದ ಆಧುನೀಕರಣದಲ್ಲಿ ದೊಡ್ಡ ಬದಲಾವಣೆ ಆಗಿದೆ. ಅಂತಾರಾಷ್ಟ್ರೀಯ ಮಟ್ಟದ ವಿನ್ಯಾಸವಿರುವ ಪೀಠೋಪಕರಣಗಳು ಪ್ರದರ್ಶನದಲ್ಲಿ ಲಭ್ಯವಿದೆ. ಪೀಠೋಪಕರಣ ಉದ್ಯಮ ವಿಸ್ತಾರವಾದದ್ದು, ಅವುಗಳಿಗೆ ಬ್ರ್ಯಾಡಿಂಗ್ ಮಾಡುವುದರಿಂದ ಉತ್ತಮ ಬೆಲೆ ಹಾಗೂ ಮಾರುಕಟ್ಟೆ ಸಿಗುತ್ತದೆ. ಈ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸಲಹೆ ನೀಡಿದರು.

33000 ಉದ್ಯಮಗಳಿಗೆ ಸಹಾಯ:
ಚರ್ಮೋದ್ಯಮ ಅನಾದಿಕಾಲದಿಂದಲೂ ಇದೆ. ಚರ್ಮ ಕುಶಲಕರ್ಮಿಗಳು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮುಂದುವರಿಯಬೇಕು. ಇದಕ್ಕಾಗಿ ಚರ್ಮೋದ್ಯಮದಲ್ಲಿ ನೂತನ ತಂತ್ರಜ್ಞಾನ, ಯಂತ್ರೋಪಕರಣಗಳನ್ನು ಬಳಸುವ ಮೂಲಕ ಚರ್ಮದ ಉತ್ಪನ್ನ ಹಾಗೂ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬೇಕು. ಶಿಕ್ಷಣ ಪಡೆದು ಸಮಾಜದಲ್ಲಿ ಇತರರಿಗೆ ಪ್ರೇರಣೆ ನೀಡುವಂತೆ ಬಾಳಬೇಕು. ಈ ದಿಸೆಯಲ್ಲಿ ಲಿಡ್ಕರ್ ಪಾತ್ರ ದೊಡ್ಡದಿದೆ. ಚರ್ಮೋದ್ಯಮದಲ್ಲಿ ಉದ್ಯೋಗ, ಉತ್ಪಾದನೆಗಳನ್ನು ಹೆಚ್ಚಿಸಲು ಎಲ್ಲ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ. ಲಿಡ್ಕರ್ ನಿಗಮದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಲಿಡ್ಕರ್ ಸಂಸ್ಥೆಯನ್ನು ಸಮಾಜ ಕಲ್ಯಾಣ ಇಲಾಖೆಗೆ ಸೇರಿಸಿ ಕಳೆದ ಐದು ವರ್ಷಗಳಿಂದ ₹ 237 ಕೋಟಿ ಅನುದಾನ ಒದಗಿಸುವ ಮೂಲಕ 33000 ಉದ್ಯಮಗಳಿಗೆ ಸಹಾಯವನ್ನು ಮಾಡಲಾಗಿದೆ ಎಂದರು.

ಯುವಕರಿಗೆ ಉದ್ಯೋಗ ಸೃಷ್ಟಿ ಆದ್ಯತೆ :
ಎಸ್.ಸಿ., ಎಸ್.ಟಿ. ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಪರಿಶಿಷ್ಟ ಜಾತಿಯವರು ಜಮೀನು ಖರೀದಿಗೆ ಇದ್ದ ₹ 15 ಲಕ್ಷ ಅನುದಾನವನ್ನು ₹ 20 ಲಕ್ಷಗಳಿಗೆ ಹೆಚ್ಚಿಸಲಾಗಿದೆ. ಪರಿಶಿಷ್ಟ ಜಾತಿಯ 30 ಲಕ್ಷಕ್ಕಿಂತ ಹೆಚ್ಚಿನ ಮನೆಗಳಿಗೆ 75 ಲಕ್ಷ ಯೂನಿಟ್‍ವರೆಗೆ ಉಚಿತ ವಿದ್ಯುತ್ ನೀಡುವ ವಿನೂತನ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಶಿಕ್ಷಣ, ಉದ್ಯೋಗ, ಸಬಲೀಕರಣ ನೀತಿಯ ಆಧಾರದ ಮೇಲೆ ಕೆಲಸ ಮಾಡಲಾಗುತ್ತಿದೆ. ಎಸ್ಸಿ, ಎಸ್ಟಿ, ಒಬಿಸಿ ಜನಾಂಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರಾಜ್ಯದ ಪ್ರಮುಖ ಶೈಕ್ಷಣಿಕ ಕೇಂದ್ರಗಳಲ್ಲಿ 1000 ಕೊಠಡಿಗಳ ಹಾಸ್ಟೆಲ್‍ಗಳನ್ನು ನಿರ್ಮಿಸಲಾಗುವುದು. ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ, ಯುವಕರಿಗೆ ಉದ್ಯೋಗ ಸೃಷ್ಟಿ ಆದ್ಯತೆ ನೀಡಲಾಗಿದೆ. ಸರ್ಕಾರದ ಸಾಲ ಸೌಲಭ್ಯದ ಯೋಜನೆಗಳು ಜನರಿಗೆ ಒದಗಿಸಲು ಜಿಲ್ಲೆಗೊಂದಂತೆ ಆಂಕರ್ ಬ್ಯಾಂಕ್ ಮಾಡಲು ಆದೇಶ ನೀಡಲಾಗಿದೆ ಎಂದರು.

ಮುಖ್ಯಮಂತ್ರಿ Basavaraj Bommai ಅವರು ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾಜ ಕಲ್ಯಾಣ ಇಲಾಖೆ ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಆಯೋಜಿಸಿದ್ದ ರಾಜ್ಯ ಮಟ್ಟದ ಚರ್ಮ ಕುಶಲಕರ್ಮಿಗಳ ಸಮಾವೇಶ ಹಾಗೂ ಚರ್ಮ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಸಚಿವ ಎ. ನಾರಾಯಣಸ್ವಾಮಿ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಡಾ.ಬಾಬು ಜಗಜೀವನ್ ರಾಂ ಅಭಿವೃದ್ಧಿ ನಿಗಮದ ಅಧ್ಯಕ್ಷ ಲಿಂಗಣ್ಣ, ಸಂಸದ ಪಿ.ಸಿ. ಮೋಹನ್, ಶಾಸಕ ರಮೇಶಗೌಡ, ಎಂ.ಸಿ. ಆಂಡ್ ಎ. ಸಂಸ್ಥೆ ಅಧ್ಯಕ್ಷ ಮುನಿಕೃಷ್ಣ ಮತ್ತು ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!