ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮೇಲ್ಮಟ್ಟಿ ಗ್ರಾಮದ ರಾಧಿಕಾ ಗಡ್ಡಹೊಳಿ ಎಂಬ ಗರ್ಭಿಣಿ, ಸಕಾಲದಲ್ಲಿ ಗರ್ಭದಲ್ಲಿರುವ ಶಿಶುವನ್ನು ಕಳೆದುಕೊಂಡಿದ್ದಾರೆ.
ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ, ಎಂಟೂವರೆ ತಿಂಗಳ ಗರ್ಭಿಣಿಗೆ ಮನೆಯಲ್ಲಿ ಫಿಟ್ಸ್ ಬಂದಿತ್ತು. ತಕ್ಷಣ ಕುಟುಂಬಸ್ಥರು ಅವರನ್ನು ತಕ್ಷಣ ಯಮಕನಮರಡಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ಬೆಳಗಾವಿಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಖಾಸಗಿ ಆಸ್ಪತ್ರೆಗೆ ಸೇರುವ ಹೊತ್ತಿಗೆ ಗರ್ಭಿಣಿಯ ಸ್ಥಿತಿ ಗಂಭೀರವಾಗಿತ್ತು. ಆಸ್ಪತ್ರೆ ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಿದ್ದರೆ ಮೊದಲು ಹಣ ಪಾವತಿಸಬೇಕೆಂದು ಹೇಳಿದ್ದರು. ಹಣ ಪಾವತಿಸಲು ಆಗದ ಹಿನ್ನಲೆಯಲ್ಲಿ, ರಾತ್ರಿ 12 ಗಂಟೆ ಸುಮಾರಿಗೆ ಕುಟುಂಬಸ್ಥರು ಗರ್ಭಿಣಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು, ನಂತರ ಅವರನ್ನು ಬಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆಸ್ಪತ್ರೆಗಳಿಗೆ ಅಲೆಯುವ ವೇಳೆ ಗರ್ಭದಲ್ಲೇ ಮಗು ಸಾವನ್ನಪ್ಪಿದೆ. ಮಗು ಮೃತಪಟ್ಟು 6 ಗಂಟೆ ಕಳೆದರೂ ಗರ್ಭದಲ್ಲೇ ಇದ್ದು, ಮಗು ಹೊರ ತೆಗೆದು ಗರ್ಭಿಣಿ ಜೀವ ಉಳಿಸಿಕೊಳ್ಳಲು ವೈದ್ಯರು ಹರಸಾಹಸ ಪಡುತ್ತಿದ್ದಾರೆ. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.