ಪಾಕ್‌ನಲ್ಲಿ ಸಮಾಜ ತಲೆತಗ್ಗಿಸುವಂತಹ ನೀಚ ಕೃತ್ಯ: ತುಂಬು ಗರ್ಭಿಣಿ ಮೇಲೆ ಐವರಿಂದ ಗ್ಯಾಂಗ್‌ ರೇಪ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಝೇಲಂ ನಗರದಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂತಹ ನೀಚ ಕೃತ್ಯವೊಂದು ನಡೆದಿದೆ. ತುಂಬುಗರ್ಭಿಣಿಯೊಬ್ಬಳ ಮೇಲೆ ಐವರು ಕೀಚಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಮಹಿಳೆ ಮನೆಗೆ ನುಗ್ಗಿದ ಕಿಡಿಗೇಡಿಗಳು ಆಕೆಯ ಪತಿ ಮೇಲೆ ಹಲ್ಲೆ ನಡೆಸಿ ಹಗ್ಗದಿಂದ ಕಟ್ಟಿಬಿಗಿದಿದ್ದಾರೆ. ಬಳಿಕ ಮಗುವಿನ ನಿರೀಕ್ಷೆಯಲ್ಲಿದ್ದ ಸಂತ್ರಸ್ತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ನಂತರ ಆಸ್ಪತ್ರಗೆ ತೆರಳಿದ ಸಂತ್ರಸ್ತೆ ತನ್ನ ಮೇಲಾದ ದೌರ್ಜನ್ಯವನ್ನು ವಿವರಿಸಿದ್ದಾಳೆ. ಆಸ್ಪತ್ರೆಯ ಸಿಬ್ಬಂದಿ ಪೊಲೀಸರಿಗೆ ಘಟನೆಯನ್ನು ತಿಳಿಸಿದ್ದಾರೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಕೆಯ ರಕ್ತದ ಮಾದರಿಗಳನ್ನು ಫೋರೆನ್ಸಿಕ್ ಪರೀಕ್ಷೆಗಾಗಿ ಲಾಹೋರ್‌ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಂಜಾಬ್ ಪೊಲೀಸರು ಪ್ರಕರಣದ ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ಶೋಧಕಾರ್ಯ ಪ್ರಾರಂಭಿಸಲಾಗಿದೆ. ಪಾಕ್‌ ನಲ್ಲಿ ಅತ್ಯಾಚಾರದಂತಹ ಘಟನೆಗಳು ವ್ಯಾಪಕವಾಗಿ ನಡೆಯುತ್ತಿದ್ದು, ಮಹಿಳೆಯರಿಗೆ ಆ ರಾಷ್ಟ್ರದಲ್ಲಿ ರಕ್ಷಣೆಯೇ ಇಲ್ಲದಂತಾಗಿದೆ. ಕಳೆದ ತಿಂಗಳು ಕರಾಚಿಯಲ್ಲಿ 25 ವರ್ಷದ ಯುವತಿಯೊಬ್ಬಳ ಮೇಲೆ ಚಲಿಸುವ ರೈಲಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು.
ಫೆಬ್ರವರಿಯಲ್ಲಿ ಪಾಕ್‌ ನ ಪಂಜಾಬ್ ಪ್ರಾತ್ಯದ ಮಾಹಿತಿ ಆಯೋಗವು ಒದಗಿಸಿದ ದತ್ತಾಂಶ ಪ್ರಕಾರ, ಆ ಪ್ರಾಂತ್ಯವೊಂದರಲ್ಲೇ ಕಳೆದ ಆರು ತಿಂಗಳ ಅವಧಿಯಲ್ಲಿ ಒಟ್ಟು 2,439 ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗಿದೆ. “ಕುಟುಂಬ ಗೌರವ”ದ ಹೆಸರಿನಲ್ಲಿ 90 ಸ್ತ್ರೀಯರನ್ನು ಕೊಲ್ಲಲಾಗಿದೆ ಎಂಬ ಆಘಾತಕಾರಿ ವಿಚಾರ ಹೊರಬಿದ್ದಿತ್ತು.
ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗದ (HRCP) ಇತ್ತೀಚಿನ ವರದಿಯ ಪ್ರಕಾರ, ದೇಶದಲ್ಲಿ ಪ್ರತಿದಿನ ಕನಿಷ್ಠ 11 ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ, ಕಳೆದ ಆರು ವರ್ಷಗಳಲ್ಲಿ (2015-21) 22,000 ಕ್ಕೂ ಹೆಚ್ಚು ಅತ್ಯಾಚಾರ ಘಟನೆಗಳು ನಡೆದಿವೆ.
ಕಳೆದ ವರ್ಷದ ‘ಗ್ಲೋಬಲ್ ಜೆಂಡರ್ ಗ್ಯಾಪ್ ರಿಪೋರ್ಟ್ 2021’ ಪ್ರಕಾರ, ಪಾಕಿಸ್ತಾನವು ಲಿಂಗ ಸಮಾನತೆ ಸೂಚ್ಯಂಕದಲ್ಲಿ 156 ದೇಶಗಳಲ್ಲಿ 153 ನೇ ಸ್ಥಾನದಲ್ಲಿರುವುದು ಆ ದೇಶದಲ್ಲಿ ಮಹಿಳೆಯರು ಅದ್ಯಾವ ಪರಿ ಶೋಷಣೆಯನ್ನು ಅನುಭವಿಸುತ್ತಿದ್ದಾರೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!