ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ನಗರದ ನಾಗುರಿಯಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ, ಭಯೋತ್ಪಾದನೆ ವಿರುದ್ಧ ವಿಶ್ವಹಿಂದು ಪರಿಷತ್‌ನ ಯುವ ಸಂಘಟನೆಗಳಾದ ಬಜ ರಂಗದಳ, ದುರ್ಗಾವಾಹಿನಿ ವತಿಯಿಂದ ನ.28 ರಂದು ಬೆಳಗ್ಗೆ 9 ರಿಂದ 10 ರವರೆಗೆ ಮಂಗಳೂರಿನ ಏಳು ಕಡೆ ಭಿತ್ತಿಪತ್ರ ಪ್ರದರ್ಶಿಸುವ ಮೂಲಕ ಜನಜಾಗೃತಿ ಸಭೆ ಆಯೋಜಿಸಲಾಗಿದೆ.
ಈ ಬಗ್ಗೆ ವಿಹಿಂಪ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ತೊಕ್ಕೊಟ್ಟು ಜಂಕ್ಷನ್, ಉರ್ವಸ್ಟೋರ್ ಜಂಕ್ಷನ್, ಕಾವೂರು ಜಂಕ್ಷನ್, ಮೂಡುಬಿದಿರೆ ಜಂಕ್ಷನ್, ಸುರತ್ಕಲ್ ಮತ್ತು ಗುರುಪುರದಲ್ಲಿ ಜನಜಾಗೃತಿ ಸಭೆ ನಡೆಯಲಿದೆ. ಮುಂದಕ್ಕೆ ವರ್ಷಪೂರ್ತಿ ವಿವಿಧ ರೀತಿಯಲ್ಲಿ ಈ ಅಭಿಯಾನ ಮುಂದುವರೆಯಲಿದೆ ಎಂದು ಅವರು ಹೇಳಿದ್ದಾರೆ.
ಕರಾವಳಿಯಲ್ಲಿ ಸ್ಲೀಪರ್‌ಸೆಲ್ ಸಕ್ರಿಯ
ಕರಾವಳಿಯ ಪ್ರಮುಖ ಭಾಗಗಳಲ್ಲಿ ಈಗಾಗಲೇ ಉಗ್ರರು ಸ್ಲೀಪರ್ ಸೆಲ್ ಮುಖಾಂತರ ಸಕ್ರಿಯವಾಗಿದ್ದು, ವಿಧ್ವಂಸಕ ಕೃತ್ಯ ನಡೆಸಲು ಭಾರಿ ಸಂಚು ರೂಪಿಸುತ್ತಿದ್ದಾರೆ. ಇದೀಗ ನಗರದಲ್ಲಿ ಬಾಂಬ್ ಸ್ಫೋಟಿಸುವ ಮೂಲಕ ಕರಾವಳಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಈ ದೇಶ ವಿರೋಧಿ ಕೃತ್ಯದ ವಿರುದ್ಧ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದವರು ಹೇಳಿದ್ದಾರೆ.
ಈ ಸಂದರ್ಭ ವಿಹಿಂಪ ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರ್, ಉಪಾಧ್ಯಕ್ಷ ಹರೀಶ್ ಶೇಟ್, ಬಜರಂಗದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್, ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಉಪಸ್ಥಿತರಿದ್ದರು.