February 27, 2026
Friday, February 27, 2026
spot_img

‘ಪ್ರಚಂಡ್’ ಯುದ್ಧ ಹೆಲಿಕಾಪ್ಟರ್‌ ನಲ್ಲಿ ಹಾರಾಟ ನಡೆಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ವಾಯುಪಡೆಯ ‘ಪ್ರಚಂಡ್’ ಯುದ್ಧ ಹೆಲಿಕಾಪ್ಟರ್‌ ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹಾರಾಟ ನಡೆಸಿದ್ದಾರೆ. ಐಎಎಫ್‌ನ ಎರಡು ವಿಭಿನ್ನ ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸಿದ ಮೊದಲ ಭಾರತೀಯ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಶುಕ್ರವಾರ (ಫೆಬ್ರವರಿ 27) ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯ ಬಳಿ ಆಲಿವ್-ಹಸಿರು ಬಣ್ಣದ ಫ್ಲೈಯಿಂಗ್ ಸೂಟ್ ಮತ್ತು ಹೆಲ್ಮೆಟ್ ಧರಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಚಂಡ್ ಲಘು ಯುದ್ಧ ಹೆಲಿಕಾಪ್ಟರ್‌ನಲ್ಲಿ ಸಹ-ಪೈಲಟ್ ಆಗಿ 25 ನಿಮಿಷಗಳ ಹಾರಾಟ ನಡೆಸಿದರು.

ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಮುರ್ಮು ಕಾಕ್‌ಪಿಟ್‌ನಿಂದ ಹಾರಾಟದ ಸಮಯದಲ್ಲಿ ರಾಷ್ಟ್ರಕ್ಕೆ ಸಂದೇಶವನ್ನು ನೀಡಿದರು. ಈ ಕ್ಷಣದಲ್ಲಿ ನಾನು ಜೈಸಲ್ಮೇರ್ ಜಿಲ್ಲೆಯ ಮೇಲೆ ಹಾರಾಟ ಮಾಡುತ್ತಿದ್ದೇನೆ. ನಮ್ಮ ಧೈರ್ಯಶಾಲಿ ವೀರ ಸೈನಿಕರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು ಮತ್ತು ಆಳವಾದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನಿಮಗೆ ಹೃತ್ಪೂರ್ವಕ ವಂದನೆಗಳು. ಜೈ ಹಿಂದ್, ಜೈ ಭಾರತ್ʼʼ ಎಂದು ಅವರು ಹೇಳಿದ್ದಾರೆ. ಪ್ರಚಂಡ್ ಹೆಲಿಕಾಪ್ಟರ್ ಆತ್ಮನಿರ್ಭರ ಭಾರತದ ಪ್ರಬಲ ಸಂಕೇತ ಎನಿಸಿಕೊಂಡಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಂಬಾಲಾದ ವಾಯುಪಡೆ ನಿಲ್ದಾಣದಲ್ಲಿ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು. ಇದೀಗ ಇಂದಿನ ಹಾರಾಟದೊಂದಿಗೆ,ಯುದ್ಧ ಹೆಲಿಕಾಪ್ಟರ್‌ನಲ್ಲಿ ಹಾರಾಟ ನಡೆಸಿದ ಮೊದಲ ಭಾರತೀಯ ರಾಷ್ಟ್ರಪತಿಯಾದರು.

2023ರ ಏಪ್ರಿಲ್‌ನಲ್ಲಿ ಅವರು ಅಸ್ಸಾಂನ ತೇಜ್‌ಪುರ ವಾಯುಪಡೆ ನಿಲ್ದಾಣದಲ್ಲಿ ಸುಖೋಯ್-30 ಎಂಕೆಐ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ಹಿಮಾಲಯದ ವೀಕ್ಷಣೆಯೊಂದಿಗೆ ಬ್ರಹ್ಮಪುತ್ರ ಮತ್ತು ತೇಜ್‌ಪುರ ಕಣಿವೆಯ ಮೇಲೆ ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !