ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಮೈಸೂರು ಮೂಲಕವಾಗಿ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶಕ್ಕೆ ತೆರಳುತ್ತಿದ್ದು, ಅಲ್ಲಿ ತೆಪ್ಪಕಾಡಿನ ಆನೆ ಶಿಬಿರಕ್ಕೆ ಭೇಟಿ ನೀಡಲಿದ್ದಾರೆ.
ರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ಮೈಸೂರಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಗುಂಡ್ಲುಪೇಟೆ ಪರಿಸರದಲ್ಲಿ ಅಧಿಕಾರಿಗಳ ನೇತೃತ್ವದ 150 ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.
ಹೇಗಿದೆ ಪ್ರವಾಸ?
ರಾಷ್ಟ್ರಪತಿ ಮುರ್ಮು ಅವರು ಇಂದು ಮಧ್ಯಾಹ್ನ 12.30ಕ್ಕೆ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಳಿಕ ಹೆಲಿಕಾಪ್ಟರ್ ಮೂಲಕ ಮಧುಮಲೈಗೆ ತೆರಳಲಿದ್ದಾರೆ.
ಹವಾಮಾನ ವೈಪರೀತ್ಯದಿಂದ ರಸ್ತೆ ಮೂಲಕ ಸಂಚರಿಸುವ ಪ್ರಮೇಯ ಎದುರಾದರೂ ಅದಕ್ಕೆ ಪೂರಕ ಸಿದ್ಧತೆಗಳನ್ನು ಆಡಳಿತ ಕೈಗೊಂಡಿದೆ.
ತೆಪ್ಪಕಾಡಿಗೆ ರಾಷ್ಟ್ರಪತಿ ಭೇಟಿ
ಭೇಟಿಯ ಸಂದರ್ಭ ರಾಷ್ಟ್ರಪತಿಗಳು ಆಸ್ಕರ್ ವಿಜೇತ ಸಾಕ್ಷ್ಯಚಿತ್ರ ‘ದಿ ಎಲಿಫೆಂಟ್ ವಿಸ್ಪರರ್ಸ್’ ಖ್ಯಾತಿಯ ಬೊಮ್ಮ ಹಾಗೂ ಬೆಳ್ಳಿ ದಂಪತಿಯನ್ನು ಭೇಟಿ ಮಾಡಲಿದ್ದಾರೆ.