ಹೊಸದಿಗಂತ ವರದಿ, ಕಾಸರಗೋಡು:
ಕನ್ನಡ ಸಾಹಿತ್ಯ ಪರಿಷತ್ ನ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾಗಿದ್ದ ಕಾಸರಗೋಡು ಬೀರಂತಬೈಲು ನಿವಾಸಿ ಎಸ್.ವಿ.ಭಟ್ ಕಾಸರಗೋಡು (74) ಭಾನುವಾರ ಮಧ್ಯಾಹ್ನ ನಿಧನ ಹೊಂದಿದರು.
ಬದಿಯಡ್ಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಕುಸಿದು ಬಿದ್ದ ಅವರನ್ನು ಚೆಂಗಳದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಕಳೆದ ನಾಲ್ಕು ಅವಧಿಗಳಿಂದ ಕಸಾಪ ಗಡಿನಾಡ ಘಟಕದ ಅಧ್ಯಕ್ಷರಾಗಿ ಮುಂದುವರಿದಿರುವ ಅವರು ಉತ್ತಮ ಸಂಘಟನಾ ಚತುರರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ ನ್ನು ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿ ಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಜಿಲ್ಲೆಯ ಹಲವೆಡೆ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಹಾಗೂ ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿಯಾಗಿ ನಿವೃತ್ತಿ ಹೊಂದಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವೆ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.