ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ ದರ ಪರಿಷ್ಕರಣೆ ಮಾಡಲಾಗಿದ್ದು, 69 ಹೊಸ ಚಿಕಿತ್ಸೆಗಳನ್ನು ಸೇರಿಸಿ, ಒಟ್ಟು 2,191 ಚಿಕಿತ್ಸೆಗಳನ್ನು ಅಂತಿಮಗೊಳಿಸಿದಂತಾಗಿದೆ.
ಸದಸ್ಯರಿಗೆ ನೀಡುತ್ತಿರುವ ಶಸ್ತ್ರ ಚಿಕಿತ್ಸೆಗಳ ದರ ಪರಿಷ್ಕರಣೆ ಕುರಿತು ಶಾಸಕ ಡಾ.ಶ್ರೀನಿವಾಸ ಎನ್.ಟಿ. ಅವರ ಅಧ್ಯಕ್ಷತೆಯಲ್ಲಿ ರಚಿಸಿರುವ ದರ ಪರಿಷ್ಕರಣೆ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿಫಾರಸ್ಸುಗಳನ್ನು ಸಲ್ಲಿಸಿದೆ. ಪರಿಷ್ಕೃತ ಯಶಸ್ವಿನಿ ಯೋಜನೆಯನ್ನು ರಾಜ್ಯ ಸರ್ಕಾರವು 2022-23 ರಿಂದ ಮರುಜಾರಿಗೊಳಿಸಿದೆ.
ಪ್ರಸ್ತುತ ಯಶಸ್ಸಿನಿ ಯೋಜನೆಯಲ್ಲಿನ ಚಿಕಿತ್ಸಾ ದರಗಳು 2017-18 ಅವಧಿಯಲ್ಲಿ ನಿಗದಿ ಮಾಡಿದ ದರಗಳಾಗಿದ್ದು, ಪ್ರಸ್ತುತ ಮಾರುಕಟ್ಟೆ ದರಗಳಿಗೆ ಹೋಲಿಸಿದಲ್ಲಿ ಅತ್ಯಂತ ಕಡಿಮೆ ಇರುವುದಾಗಿ ತಿಳಿಸಿ ಪ್ರಮುಖ ಆಸ್ಪತ್ರೆಗಳು ಯೋಜನೆಯಡಿ ನೆಟ್ವರ್ಕ್ ಆಸ್ಪತ್ರೆಗಳಾಗಿ ಸೇರಿಕೊಳ್ಳಲು ಮುಂದೆ ಬರುತ್ತಿಲ್ಲ. ಈ ಕಾರಣಕ್ಕಾಗಿ ಚಿಕಿತ್ಸೆಗಳ ದರಗಳನ್ನು ಪರಿಷ್ಕರಿಸಲು ಸರ್ಕಾರವು ಶಾಸಕ ಡಾ.ಶ್ರೀನಿವಾಸ್ ಎನ್.ಟಿ. ಅಧ್ಯಕ್ಷತೆಯಲ್ಲಿ ತಜ್ಞ ವೈದ್ಯರನ್ನೊಳಗೊಂಡ ದರ ಪರಿಷ್ಕರಣಾ ಸಮಿತಿಯನ್ನು ರಚಿಸಿದೆ.
ಸಮಿತಿಯು ಪ್ರಸ್ತುತ ಚಿಕಿತ್ಸಾ ದರಗಳನ್ನು ಪರಿಶೀಲಿಸಿ ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಸಹಕಾರ ಸಂಸ್ಥೆಗಳ ಸದಸ್ಯರಿಗೆ ಅನುಕೂಲವಾಗುವಂತೆ ಅಗತ್ಯವಿದ್ದಲ್ಲಿ ಹೊಸ ಚಿಕಿತ್ಸೆಗಳನ್ನು ಸೇರಿಸುವುದಲ್ಲದೇ ಈಗಿನ ಸ್ಥಿತಿ-ಗತಿಗಳಿಗೆ ಅನುಗುಣವಾಗಿ ಚಿಕಿತ್ಸಾ ದರಗಳನ್ನು ಪರಿಷ್ಕರಿಸಲು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.