Saturday, June 25, 2022

Latest Posts

ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಅಗತ್ಯ: ಸಚಿವ ಪ್ರಭು ಚವ್ಹಾಣ

ಹೊಸ ದಿಗಂತ ವರದಿ, ಬೀದರ್:

ಶಿಕ್ಷಕರು ಶಾಲೆಗೆ ಬರುವ ಎಲ್ಲ ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಕಾಣಬೇಕು. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಿಸುವ ನಿಟ್ಟನಲ್ಲಿ ಪ್ರಾಥಮಿಕ ಹಂತದಿoದಲೇ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಪಶು ಸಂಗೋಪನೆ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯಗುರುಗಳಿಗೆ ನಿರ್ದೇಶನ ನೀಡಿದರು.

ಔರಾದ(ಬಿ) ಪಟ್ಟಣದ ಅಮರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜೂನ್ 23ರಂದು ಏರ್ಪಡಿಸಿದ್ದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯಗುರುಗಳಿಗೆ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರ ಮೇಲೆ ಅಪಾರ ನಿರೀಕ್ಷೆಯಿಟ್ಟುಕೊಂಡು ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಅವರ ನಿರೀಕ್ಷೆಯನ್ನು ಹುಸಿಯಾಗಿಸಬಾರದು. ಪಠ್ಯದ ಜೊತೆಗೆ ಉತ್ತಮ ನಡತೆ ಮತ್ತು ಸಂಸ್ಕಾರವನ್ನು ಕಲಿಸಿಕೊಡಬೇಕು. ಎಲ್ಲ ಮಕ್ಕಳಿಗೂ ಗುಣಾತ್ಮಕ ಶಿಕ್ಷಣ ಸಿಗುವಂತಾಗಬೇಕು. ಈ ದಿಶೆಯಲ್ಲಿ ಕಲಿಕಾ ಚೇತರಿಕಾ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಶಿಕ್ಷಕರಿಗೆ ಸೂಚಿಸಿದರು.

ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕ ವಿಭಾಗದಲ್ಲಿಯೇ ಮೊದಲ ಸ್ಥಾನ ಗಳಿಸಬೇಕೆಂಬ ಆಶಯವಿದೆ. ಇದನ್ನು ಸಾಕಾರಗೊಳಿಸಲು ಎಲ್ಲ ಶಿಕ್ಷಕರು ಪ್ರಯತ್ನಿಸಬೇಕು. ಶಿಕ್ಷಕರು ಸರಿಯಾಗಿ ಕೆಲಸ ಮಾಡುತ್ತಿರುವುದರಿಂದ ಫಲಿತಾಂಶದಲ್ಲಿ ಪ್ರತಿ ವರ್ಷ ಸುಧಾರಣೆ ಕಾಣುತ್ತಿದೆ. ಆದರೆ ಫಲಿತಾಂಶ ಶೇ.100ರಷ್ಟು ತರುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಶಿಕ್ಷಕರು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.

ಔರಾದ(ಬಿ) ವಿಧಾನಸಭಾ ಕ್ಷೇತ್ರವನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸುವ ಸಂಕಲ್ಪದೊAದಿಗೆ ಕೆಲಸ ಮಾಡುತ್ತಿದ್ದೇನೆ. ಎಲ್ಲ ಅಭಿವೃದ್ಧಿಗೂ ಮೂಲವಾಗಿರುವ ಶಿಕ್ಷಣ ಕ್ಷೇತ್ರದ ಏಳಿಗೆಗೆ ಮೊದಲ ಆದ್ಯತೆ ನೀಡಲಾಗಿದೆ. ಈ ದಿಶೆಯಲ್ಲಿ ಎಲ್ಲ ಶಾಲೆಗಳಿಗೆ ಉತ್ತಮ ಶಾಲಾ ಕಟ್ಟಡ, ಗ್ರಂಥಾಲಯ, ಆಟದ ಮೈದಾನ, ಶೌಚಾಲಯಗಳನ್ನು ಒದಗಿಸಲಾಗುತ್ತಿದೆ. ಶಿಕ್ಷಣದ ಏಳಿಗೆಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಒದಗಿಸಲು ಸಿದ್ಧನಿದ್ದೇನೆ. ಆದರೆ ಶಿಕ್ಷಕರು ಮಾತ್ರ ತಮ್ಮ ಕರ್ತವ್ಯಗಳನ್ನು ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ತಿಳಿಸಿದರು.

ಇನ್ನೂ ಎಲ್ಲಿಯಾದರೂ ಶಿಥಿಲಗೊಂಡ ಕೋಣೆಗಳಿದ್ದರೆ ಅಂಥವುಗಳ ಬಗ್ಗೆ ಮಾಹಿತಿ ಕೊಡಬೇಕು. ಆಟದ ಮೈದಾನ, ಕಂಪ್ಯೂಟರ್‌ಗಳು, ಶೌಚಾಲಯ, ಗ್ರಂಥಾಲಯ ಹೀಗೆ ಯಾವುದೇ ರೀತಿಯ ಬೇಡಿಕೆಗಳಿದ್ದಲ್ಲಿ ಪಟ್ಟಿ ಮಾಡಿ ಸಲ್ಲಿಸಿದಲ್ಲಿ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದೆಂದು ಭರವಸೆ ನೀಡಿದರು.

ಎಲ್ಲ ಶಾಲೆಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು. ಕಡ್ಡಾಯವಾಗಿ ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಇರಬೇಕು. ಎಲ್ಲ ಶಿಕ್ಷಕರು ಸಮಯಕ್ಕೆ ಶಾಲೆಗೆ ಹಾಜರಾಗಿ ಬೋಧನೆ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಹೊಸ ದಾಖಲಾತಿಯ ಪ್ರಮಾಣ ಕುಸಿತವಾಗುತ್ತಿರುವುದು ಕಂಡುಬoದಿದೆ. ಔರಾದ ವಿಧಾನಸಭಾ ಕ್ಷೇತ್ರದಲ್ಲಿರುವ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳವಾಗಬೇಕು ಎಂದು ಮುಖ್ಯಗುರುಗಳಿಗೆ ಖಡಕ್ಕಾಗಿ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿಯ ಸಹ ನಿರ್ದೇಶಕರಾದ ಜಿ.ಎಂ ವಿಜಯಕುಮಾರ ಅವರು ವಿಶೇಷ ಉಪನ್ಯಾಸ ನೀಡಿ, ಯಾವ ವಿದ್ಯಾರ್ಥಿಗಳು ದಡ್ಡರಿರುವುದಿಲ್ಲ. ಅವರನ್ನು ಜಾಣರನ್ನಾಗಿ ಮಾಡುವ ಮನೋಭಾವ ಶಿಕ್ಷಕರಲ್ಲಿ ಬರಬೇಕು. ಮಕ್ಕಳಲ್ಲಿನ ಕೀಳರಿಮೆಯನ್ನು ತೆಗೆದು ನಾನು ಕೂಡ ಸಾಧಿಸಬಲ್ಲೆ ಎಂಬ ಆತ್ಮವಿಸ್ವಾಸ ಮೂಡಿಬೇಕು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎಸ್ ನಾಗನೂರ ಅವರು ಔರಾದ(ಬಿ) ತಾಲ್ಲೂಕಿನಲ್ಲಿ ಶೈಕ್ಷಣಿಕ ಸಾಧನೆ ಹಾಗೂ 2022-23ನೇ ಸಾಲಿನ ಕಲಿಕಾ ಚಟುವಟಿಕೆಗಳ ಬಗ್ಗೆ ವಿವರಣೆ ನೀಡಿದರು. ಶಿಕ್ಷಕರ ಸಂಘದ ಪಂಢರಿ ಆಡೆ ಅವರು ಶಿಕ್ಷಣದ ಸುಧಾರಣೆಗೆ ಅಗತ್ಯವಿರುವ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.

ಔರಾದ(ಬಿ) ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬೀರೇಂದ್ರ ಸಿಂಗ್, ಕಮಲನಗರ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕಾಂತ ಹನುಮಶೆಟ್ಟಿ, ನಾರಾಯಣ ರಾಠೋಡ, ಮುಖಂಡರಾದ ಶಿವಾಜಿರಾವ್ ಪಾಟೀಲ, ಶಿಕ್ಷಕರ ಸಂಘದ ಗಜಾನನ ಮಳ್ಳಾ, ಬಸವರಾಜ ಪಾಟೀಲ, ರಮೇಶ ಮಾಸಿಮಾಡೆ, ಸೂರ್ಯಕಾಂತ ಸಿಂಘೆ, ಶಿವಶರಣಪ್ಪ ವಲ್ಲೆಪೂರೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯಗುರುಗಳು ಕಾರ್ಯಕ್ರಮದಲ್ಲಿದ್ದರು. ಶಿಕ್ಷಕ ಶಾಲಿವಾನ ಉದಗೀರೆ ನಿರೂಪಿಸಿದರು.

ಶಿಕ್ಷಕರ ಭವನಕ್ಕೆ 25 ಲಕ್ಷ ಘೋಷಣೆ: ಔರಾದ(ಬಿ) ತಾಲ್ಲೂಕಿನಲ್ಲಿ ಅಗತ್ಯವಿರುವ ಶಿಕ್ಷಕರ ಭವನ ನಿರ್ಮಿಸಿಕೊಡಬೇಕು ಎಂಬ ಶಿಕ್ಷಕರ ಬೇಡಿಕೆಗೆ ಸ್ಪಂದಿಸಿದ ಸಚಿವರು, ನಿವೇಶನ ಸೌಲಭ್ಯವಿದ್ದಲ್ಲಿ ಶಿಕ್ಷಕರ ಭವನ ನಿರ್ಮಿಸಿಕೊಡಲಾಗುವುದು. ಇದಕ್ಕೆ ಬೇಕಿರುವ 25 ಲಕ್ಷ ಅನುದಾನವನ್ನು ಶಾಸಕರ ನಿಧಿಯಲ್ಲಿ ಒದಗಿಸಲಾಗುವುದೆಂದು ಭರವಸೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss