ಜಗಳೂರು-ಭರಮಸಾಗರ ಏತ ನೀರಾವರಿ ಉದ್ಘಾಟಿಸಲು ಪ್ರಧಾನಿಗೆ ಆಹ್ವಾನ: ತರಳಬಾಳು ಶ್ರೀ

ಹೊಸದಿಗಂತ ವರದಿ, ಚಿತ್ರದುರ್ಗ:

ರಾಜ್ಯದ ಏತ ನೀರಾವರಿ ಯೋಜನೆಗಳಿಗೆ ಮಾದರಿಯಾದ ಜಗಳೂರು-ಭರಮಸಾಗರ ಏತ ನೀರಾವರಿ ಉದ್ಘಾಟಿಸಲು ಹಾಗೂ ಸಿರಿಗೆರೆಯಲ್ಲಿ ೪೫ ಕೋಟಿ ವೆಚ್ಚದಲ್ಲಿ ಬೃಹನ್ಮಠದಿಂದ ನಿರ್ಮಿಸಿರುವ ಅಮೇರಿಕೆಯ ಶ್ವೇತ ಭವನದ ಮಾದರಿಯ ಶ್ರೀ ಗುರುಶಾಂತೇಶ್ವರ ದಾಸೋಹ ಭವನದ ಉದ್ಘಾಟನೆಗೆ ಪ್ರಧಾನಿ ನರೇಂದ ಮೋದಿ ಅವರನ್ನು ಆಹ್ವಾನಿಸುವುದಾಗಿ ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿ, ಕರುನಾಡಿನ ಭಗೀರಥ ಅಭಿದಾನದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತುಂಬಿ ಹರಿಯುತ್ತಿರುವ ಭರಮಸಾಗರ ಕೆರೆಯ ತೂಬಿನಲ್ಲಿ ನೀರು ಸೋರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ ಸ್ವಾಮೀಜಿ, ಯೋಜನೆಗಳ ಉದ್ಘಾಟನೆಗೆ ಪ್ರಧಾನಿ ಅವರನ್ನು ಆಹ್ವಾನಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
೨೦೧೮ ರ ಜಗಳೂರು ತರಳಬಾಳು ಹುಣ್ಣಿಮೆಯ ಮಹೋತ್ಸವದ ಆಶಯದಂತೆ ಸರ್ಕಾರದ ಸಹಕಾರದೊಂದಿಗೆ ೧೨೦೦ ಕೋಟಿ ರೂ.ಗಳ ವೆಚ್ಚದಲ್ಲಿ ಅನುಷ್ಠಾನಗೊಂಡ ಭರಮಸಾಗರ ಏತ ನೀರಾವರಿ ವ್ಯಾಪ್ತಿಯ ೪೩ ಕೆರೆಗಳಿಗೆ, ಜಗಳೂರು ಏತ ಸೀರಾವರಿ ಯೋಜನೆ ವ್ಯಾಪ್ತಿಯ ೫೭ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾರ್ಯವು ಮುಕ್ತಾಯದ ಹಂತ ತಲುಪಿದೆ. ಎಲ್ಲಾ ಕೆರೆಗಳಿಗೆ ನೀರು ಹರಿದು ರೈತರ ನೆಮ್ಮದಿಯ ದಿನಗಳನ್ನು ಕಾಣುವ ಸಾರ್ಥಕತೆಯ ಗಳಿಗೆಗೆ ಎಲ್ಲರೂ ನಿರೀಕ್ಷಿಸುತ್ತಿದ್ದಾರೆ ಎಂದರು.
ಕೆರೆ ತೂಬಿನಲ್ಲಿ ನೀರು ಸೋರಿಕೆಯಾಗುತ್ತಿದ್ದು, ಹರಿವಿನ ಸ್ಥಿತಿಯನ್ನು ಗಮನಿಸಿ ಖಚಿತಪಡಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ೪ ಪಾಳಿಯನ್ನು ರಚಿಸಿ ಯುವಕರನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ. ನೀರಿನ ಹರಿವಿನ ಕ್ಷಣದ ಮಾಹಿತಿಯ ವೀಡಿಯೋಗಳನ್ನು ನೀರಾವರಿ ನಿಗಮದ ಅಧಿಕಾರಿಗಳಿಗೆ ರವಾನಿಸುವಂತೆ ಕ್ರಮವಹಿಸಲಾಗಿದೆ ಎಂದು ವಿವರಿಸಿದರು.
೪೩ ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಮೀಸಲಿರಿಸಿ ೬೬ ಕೆ.ವಿ. ವಿದ್ಯುತ್ ಸ್ಥಾವರ ಮತ್ತು ಟವರ್ ಕಾಮಗಾರಿಗೆ ಕೆಲವು ರೈತರು ಅಡ್ಡಿಪಡಿಸುತ್ತಿದ್ದಾರೆ ಎನ್ನಲಾಗಿದೆ. ರೈತರೊಂದಿಗೆ ಯೋಜನೆಯ ಫಲಶೃತಿಯ ಬಗ್ಗೆ ಮನವರಿಕೆ ಮಾಡಿ ಮನವೊಲಿಸುವಂತೆ ಜಿ.ಪಂ. ಮಾಜಿ ಉಪಾಧ್ಯಕ್ಷ ಎಚ್.ಎನ್. ತಿಪ್ಪೇಸ್ವಾಮಿ ಅವರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಕೆರೆ ನೀರಾವರಿಯ ಸಮಿತಿಯ ಅಧ್ಯಕ್ಷ ಶಶಿಧರ್, ಸಾಮಿಲ್ ಶಿವಣ್ಣ, ಸೇರಿದಂತೆ ಪದಾಧಿಕಾರಿಗಳು ನೂರಾರು ರೈತರು ಹಾಜರಿದ್ದರು.
ತರಳಬಾಳು ಸದ್ಧರ್ಮ ನ್ಯಾಯ ಪೀಠ ಆರಂಭ :
ಕೊರೋನಾ ಕಾರಣದಿಂದ ತರಳಬಾಳು ಸದ್ಧರ್ಮ ನ್ಯಾಯಪೀಠದ ಕಾರ್ಯಕಲಾಪಗಳು ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದವು. ಜನವರಿ ತಿಂಗಳಲ್ಲಿ ಎರಡು ಸೋಮವಾರ ನ್ಯಾಯಪೀಠವನ್ನು ಪುನರಾರಂಭಿಸಿ ಮತ್ತೆ ಕೋವಿಡ್ ಹೆಚ್ಚಾದ ಕಾರಣದಿಂದ ಮುಂದೂಡಲಾಗಿತ್ತು. ಈಗ ಎಲ್ಲಾ ನ್ಯಾಯಾಲಯಗಳು ಖುದ್ದಾಗಿ ಹಾಜರಾಗಲು ಅವಕಾಶ ಕಲ್ಪಿಸಿಕೊಟ್ಟಿವೆ.
ಆದ ಕಾರಣ ನಮ್ಮ ಮಠದ ಸದ್ಧರ್ಮ ನ್ಯಾಯಪೀಠದ ಕಾರ್ಯಕಲಾಪಗಳನ್ನು ಶ್ರೀ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಸೋಮವಾರದಿಂದ ಪುನರಾರಂಭಗೊಳಿಸಲು ನಿರ್ಧರಿಸಿಸಲಾಗಿದೆ. ಇನ್ನು ಮುಂದೆ ಪ್ರತಿ ಸೋಮವಾರ ಎಂದಿನಂತೆ ಭಕ್ತಾದಿಗಳು ನ್ಯಾಯಪೀಠಕ್ಕೆ ತಮ್ಮ ಅಹವಾಲುಗಳೊಂದಿಗೆ ಹಾಜರಾಗಬಹುದು ಎಂದು ಶ್ರೀಗಳು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!