ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಮೂಲದ ‘ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್’ ಮಾರ್ನಿಂಗ್ ಕನ್ಸಲ್ಟ್ ನಡೆಸಿದ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜಾಗತಿಕ ನಾಯಕರ ಪಟ್ಟಿಯಲ್ಲಿ ಶೇ 76 ರಷ್ಟು ರೇಟಿಂಗ್ನೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ಈ ಮೂಲಕ ಶೇಕಡಾ 76 ರಷ್ಟು ಜನರು ಪ್ರಧಾನಿಮೋದಿಯವರ ನಾಯಕತ್ವವನ್ನು ಅನುಮೋದಿಸಿದ್ದು, ಶೇಕಡಾ 18 ರಷ್ಟು ಜನರು ಮಾತ್ರ ಅವರನ್ನು ಒಪ್ಪುವುದಿಲ್ಲ ಮತ್ತು ಶೇಕಡಾ 6 ರಷ್ಟು ಜನರು ಯಾವುದೇ ಅಭಿಪ್ರಾಯವನ್ನು ನೀಡಿಲ್ಲ ಎಂದು ತಿಳಿಸಿದೆ.
ದೆಹಲಿಯಲ್ಲಿ ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಮೋದಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸ್ವಿಟ್ಜರ್ಲೆಂಡ್ ಅಧ್ಯಕ್ಷ ಅಲೈನ್ ಬರ್ಸೆಟ್ ಅವರು ಶೇಕಡಾ 64 ರಷ್ಟು ಅನುಮೋದನೆ ಪಡೆದಿದ್ದರೆ, ಮೆಕ್ಸಿಕೊದ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರು ಶೇ 61 ರಷ್ಟು ಅನುಮೋದನೆಯನ್ನು ಹೊಂದಿದ್ದಾರೆ.
ಅಮೆರಿಕದ ಅಧ್ಯಕ್ಷ ಜೋ ಬೈಡನ್ ಶೇಕಡಾ 40, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಶೇಕಡಾ 37, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಶೇಕಡಾ 27 ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಶೇಕಡಾ 24 ರ ಅನುಮೋದನೆಯನ್ನು ಪಡೆದಿದ್ದಾರೆ.
ಈ ರೇಟಿಂಗ್‌ಗಳು ಸೆಪ್ಟೆಂಬರ್ 6 ರಿಂದ 12 ರವರೆಗೆ ಸಂಗ್ರಹಿಸಿದ ಡೇಟಾವನ್ನು ಆಧರಿಸಿವೆ ಎಂದು ಮಾರ್ನಿಂಗ್ ಕನ್ಸಲ್ಟ್ ಹೇಳಿದೆ. ಅಮೆರಿಕದಿಂದ, ಸರಾಸರಿ 45,000 ಮಂದಿ ಸಮೀಕ್ಷೆಯಲ್ಲಿ ಭಾಗಿಯಾದರೆ, ಇತರ ದೇಶಗಳಿಂದ, ಸರಿಸುಮಾರು 500 ರಿಂದ 5,000 ವರೆಗೆ ಜನ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.