ಸಾಂಸ್ಕೃತಿಕ ನಗರಿಯಲ್ಲಿ ಮೈಸೂರು ಪೇಟ ತೊಟ್ಟು ಭರ್ಜರಿ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ!

ಹೊಸದಿಗಂತ ವರದಿ, ಮೈಸೂರು;

ಕೇಸರಿ ಶಲ್ಯವನ್ನು ಹೆಗಲ ಮೇಲೆ ಹಾಕಿಕೊಂಡು, ಬಿಜೆಪಿಯ ರಥವನ್ನೇರಿದ ಪ್ರಧಾನಿ ನರೇಂದ್ರಮೋದಿಯವರು ರಾಜರ ಊರಾದ ಮೈಸೂರಿನ ರಾಜಪಥದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಇದು ಮಿನಿ ದಸರಾವನ್ನು ನೆನಪಿಸುವಂತಿತ್ತು.

ಸೇನೆಯ ಹೆಲಿಕಾಪ್ಟರ್‌ನಲ್ಲಿ ಮೈಸೂರಿಗೆ ಆಗಮಿಸಿದ ಮೋದಿಯವರು ಗನ್‌ಹೌಸ್ ವೃತ್ತದಲ್ಲಿ ಸಜ್ಜಾಗಿ ನಿಂತಿದ್ದ ಬಿಜೆಪಿಯ ಪ್ರಚಾರದ ರಥವನ್ನೇರಿದರು. ಅವರಿಗೆ ಶಾಸಕ ಎಸ್.ಎ.ರಾಮದಾಸ್ ಅವರು ಮೈಸೂರು ಪೇಟ ತೋಡಿಸಿ, ಶ್ರೀಗಂಧದ ಹಾರ ಹಾಕಿ, ಕುಸರಿ ಕೆಲಸ ಮಾಡಿದ್ದ ಕೇಸರಿ ಮೈಸೂರು ಸಿಲ್ಕ್ನಿಂದ ತಯಾರಿಸಿದ್ದ ಶಲ್ಯವನ್ನು ಹೊದಿಸಿ ಸನ್ಮಾನಿಸಿದರು. ನಂತರ ಮೈಸೂರಿನ ಪಾರಂಪರಿಕ ವಸ್ತುಗಳನ್ನು ನೆನಪಿನ ಕಾಣಿಕೆಯನ್ನು ನೀಡಿದರು. ಬಳಿಕ ಮೋದಿಯವರು ರಾಮದಾಸ್ ನೀಡಿದ್ದ ಕೇಸರಿ ಶಾಲನ್ನು ಹೆಗಲ ಮೇಲೆ ಹಾಕಿಕೊಂಡು ರೋಡ್ ಶೋ ಆರಂಭಿಸಿದರು. ಅವರಿಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಪ್ರತಾಪ್‌ಸಿಂಹ, ಶಾಸಕ ಎಸ್.ಎ.ರಾಮದಾಸ್ ಸಾಥ್ ನೀಡಿದರು.

ಗನ್ ಹೌಸ್ ವೃತ್ತವನ್ನು ಒಂದು ಸುತ್ತು ಹಾಕಿ ಮೋದಿಯವರು ಅಲ್ಲಿ ನೆರೆದಿದ್ದ ಜನರತ್ತ ಕೈಬೀಸಿದರು. ಬಿಜೆಪಿಗೆ ಮತ ನೀಡುವಂತೆ ಕೋರಿದರು. ಬಳಿಕ ಸಂಸ್ಕೃತ ಪಾಠ ಶಾಲೆಯ ಮೂಲಕ ನಗರಪಾಲಿಕೆಯ ವೃತ್ತದ ಮೂಲಕ ಕೆ.ಆರ್.ವೃತ್ತಕ್ಕೆ ರೋಡ್ ಶೋ ಬಂತು. ಅಲ್ಲಿ ನೆರೆದಿದ್ದ ಜನರು ಮೋದಿಯವರಿಗೆ ಜಯ ಘೋಷಣೆಗಳನ್ನು ಮೊಳಗಿಸಿದರು. ಆ ವೇಳೆಗೆ ಕತ್ತಲಾದ ಕಾರಣ, ದೀಪಗಳು ಬೆಳಗಿದರೆ, ಜನರು ತಮ್ಮ ಮೊಬೈಲ್‌ಗಳಲ್ಲಿ ಲೈಟ್‌ಗಳನ್ನು ಆನ್ ಮಾಡಿದರಲ್ಲದೆ, ಮೋದಿಯವರನ್ನು ತಮ್ಮ ಮೊಬೈಲ್‌ಗಳಲ್ಲಿ ಪೋಟೋ ತೆಗೆದುಕೊಂಡರು. ದೃಶ್ಯಗಳನ್ನು ಸೆರೆ ಹಿಡಿದರು.

ನಂತರ ರೋಡ್ ಶೋ ಚಿಕ್ಕಗಡಿಯಾರ, ಸಯ್ಯಾಜಿರಾವ್ ವೃತ್ತ, ಅಲ್ಲಿಂದ ಮಾರುಕಟ್ಟೆ ರಸ್ತೆ, ಕೆ.ಆರ್. ಆಸ್ಪತ್ರೆ ರಸ್ತೆ , ಆರ್ಯುವೇದ ವೃತ್ತ, ಆರ್‌ಎಂಸಿ, ತಿಲಕ್‌ನಗರ ವೃತ್ತದ ಮೂಲಕ ಸಾಗಿತು. ಮಾರ್ಗದ ಉದ್ದಕ್ಕೂ ಮೋದಿ ಅಭಿಮಾನಿಗಳು, ಜನರು ಬಗೆ, ಬಗೆಯ ಪುಪ್ಪಗಳನ್ನು ಮೋದಿಯವರತ್ತ ಎಸೆದು ಪುಷ್ಪಮಳೆಗೈದರು. ಜನರತ್ತ ಕೈಬೀಸುತ್ತಲೇ ಮೋದಿಯವರು ನಗುಮುಖದಿಂದ ಸಾಗಿಸಿದರು. ಅಪಾರವಾದ ಜನಸ್ತೋಮವನ್ನು ಕಂಡು ಪುಳಕಗೊಂಡರು.

ಮೈಸೂರು ಪೇಟ ತೊಟ್ಟು ಶ್ವೇತ ವಸ್ತ್ರದಾರಿಗಳಾಗಿ ಸಾಗಿದ ಸ್ವಯಂ ಸೇವಕರು


ಮೋದಿಯವರ ರಥದ ಮುಂದೆ 500ಕ್ಕೂ ಹೆಚ್ಚು ಸ್ವಯಂಸೇವಕರು ಶ್ವೇತ ವಸ್ತçದಾರಿಗಳಾಗಿ, ಮೈಸೂರು ಪೇಟವನ್ನು ತೊಟ್ಟು, ಬಿಜೆಪಿಯ ಭಾವುಟಗಳನ್ನು ಹಿಡಿದು ಸಾಗಿದರು. ಅಲ್ಲದೇ ಮೋದಿಪರವಾಗಿ ಘೋಷಣೆ ಮೊಳಗಿಸುತ್ತಾ ನೆರೆದಿದ್ದವರನ್ನು ಹುರಿದುಂಬಿಸುತ್ತಾ ಸಾಗಿದರು. ಅವರ ಮುಂದೆ ಕೊಡಗು ಸೇರಿದಂತೆ ಮೈಸೂರು ಪ್ರಾಂತ್ಯದ ಸಾಂಪ್ರಾದಾಯಿಕ ಉಡುಗೆಗಳನ್ನು ತೊಟ್ಟಿದ್ದ ಮಹಿಳೆಯರು, ಪುರುಷರು, ಮಕ್ಕಳು ಸಾಗುವ ಮೂಲಕ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಗಮನ ಸೆಳೆದರು.

ಜಾನಪದ ಕಲಾತಂಡಗಳಿoದ ಭರ್ಜರಿ ಸ್ವಾಗತ


ಸುಮಾರು 25 ಕಲಾತಂಡಗಳು ಈ ರೋಡ್ ಶೋನಲ್ಲಿ ಭಾಗವಹಿಸುವ ಮೂಲಕ ಮೆರಗನ್ನು ನೀಡಿದವು. ಪ್ರಧಾನಿ ನರೇಂದ್ರ ಮೋದಿಯವರಿಗೆ ಭರ್ಜರಿ ಸ್ವಾಗತವನ್ನು ನೀಡಿದವು. ವಿದ್ಯಾಪೀಠ ಸರ್ಕಲ್ ಹತ್ತಿರ ನಾದಸ್ವರ ಹಾಗೂ ಮಹಿಳೆಯರಿಂದ ಪೂರ್ಣ ಕುಂಭ ಸ್ವಾಗತವನ್ನು ನೀಡಲಾಯಿತು. ಭರತ ನಾಟ್ಯ ,ಸಂಸ್ಕ್ರತ ಪಾಠಶಾಲೆ ಹತ್ತಿರ ಸ್ಯಾಕ್ಸ್ ಫೋನ್, ಮಹಾನಗರ ಪಾಲಿಕೆ ಮುಂದೆ ಚಿಲಿಪಿಲಿ ಗೊಂಬೆ, ಕೆಆರ್ ಸರ್ಕಲ್‌ನ ಹತ್ತಿರ ನಗಾರಿ ಬನ್ನಿಮಂಟಪದ ಹತ್ತಿರ ಡೊಳ್ಳು ಕುಣಿತ, ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದ ಮುಂದೆ ಪೂಜಾ ಕುಣಿತ, ಮಾರ್ಕೆಟ್ ಮುಂದೆ ಸೋಮನ ಕುಣಿತ, ಬನ್ನಿಮಂಟಪದ ಎಡ ಬಲ ಭಾಗದಲ್ಲಿ ಪಟ್ಟದ ಕುಣಿತ ಹಾಗೂ ವೀರಭದ್ರ ಕುಣಿತ ,ಹೈವೆ ಸರ್ಕಲದ ಹತ್ತಿರ ಕಂಸಾಳೆ ಮುಂತಾದ ಕಲಾತಂಡಗಳು ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದವು.

ಮೋದಿ ಜೀವನದ ಭಿತ್ತಿ ಚಿತ್ರಗಳ ಪ್ರದರ್ಶನ


ರೋಡ್ ಶೋನಲ್ಲಿ ಭಾಗವಹಿಸಿದ್ದ ಜನರು ಪ್ರಧಾನಿ ನರೇಂದ್ರ ಮೋದಿಯವರು ಬಾಲ್ಯದ ಜೀವನದಿಂದ ಹಿಡಿದು ಜಿ.20ರ ಅಧ್ಯಕ್ಷರಾಗಿ, ಜಾಗತಿಕ ನಾಯಕರಾಗಿ ಬೆಳೆದು ಬಂದ ಕುರಿತು ಭಿತ್ತಿ ಚಿತ್ರಗಳನ್ನು ಹಿಡಿದಿದ್ದ ಜನರು ಅದನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು.

ಮಹಾಪುರುಷರ ವೇಷಧಾರಿಗಳು
ಮೋದಿಯವರ ರೋಡ್ ಶೋ ನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಒಬ್ಬವ್ವ, ಸರ್ ಎಂ. ವಿಶ್ವೇಶ್ವರಯ್ಯ, ಬಸವಣ್ಣ ಸೇರಿದಂತೆ ಮಹಾಪುರುಷರ ವೇಷ,ಭೂಷಣಗಳನ್ನು ತೊಟ್ಟವರು ಭಾಗವಹಿಸಿ ಮೋದಿಯವರು ಸೇರಿದಂತೆ ಎಲ್ಲರ ಗಮನವನ್ನು ಸೆಳೆದು, ರೋಡ್ ಶೋಗೆ ಮೆರಗು ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!